ನವದೆಹಲಿ: ಭಿನ್ನಮತೀಯ ಆಮ್ ಆದ್ಮಿ ಪಕ್ಷದ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರೊಂದಿಗೆ ಹೊಂದಾಣಿಕೆ ಸಾಧ್ಯತೆ ಅತ್ಯಲ್ಪ ಎಂದಿದ್ದಾರೆ ಆಪ್ ಪಕ್ಷದ ಮತ್ತೊಬ್ಬ ನಾಯಕ ಅಶುತೋಶ್.
"ಪ್ರಾಮಾಣಿಕವಾಗಿ ಹೇಳಬೇಕೆಂದರ, ಹೊಂದಾಣಿಕೆಯ ಸಾಧ್ಯತೆ ಅತ್ಯಲ್ಪ ಏಕೆಂದರೆ ಅವರು (ಭೂಷಣ್ ಮತ್ತು ಯಾದವ್) ಕೇಜ್ರಿವಾಲ್ ಅವರನ್ನು ವಜಾ ಮಾಡುವಂತೆ(ರಾಷ್ಟ್ರೀಯ ಸಂಚಾಲಕ ಸ್ಥಾನದಿಂದ) ಬೇಡಿಕೆಯಿಟ್ಟಿದ್ದಾರೆ" ಎಂದು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. "ನೀವು ಪಕ್ಷದ ಭಾಗವಾಗಿದ್ದರೆ, ಪಕ್ಷದ ನಾಯಕನನ್ನು ಒಪ್ಪಿಕೊಳ್ಳಬೇಕು" ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳು ಕಳೆಯುವ ಮೊದಲೇ ಗುರುವಾರ ಪಕ್ಷದ ವಕ್ತಾರರು, ಹಿರಿಯ ನಾಯಕರಾದ ಯೋಗೆಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದಿದ್ದರು, ಆದರೆ ಈ ಇಬ್ಬರೂ ನಾಯಕರು ಇದನ್ನು ಅಲ್ಲಗೆಳೆದಿದ್ದರು.
ಈ ನಿಟ್ಟಿನಲ್ಲಿ ತಾರಕಕ್ಕೇರಿರುವ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಕ್ಕೆ ಯಾವುದೇ ಉಪಶಮನವಿದ್ದಂತೆ ಕಾಣುತ್ತಿಲ್ಲ ಆದುದರಿಂದ ಇಬ್ಭಾಗ ಅಭಾಧಿತ ಎನ್ನಲಾಗುತ್ತಿದೆ.