ತಿರುವನಂತಪುರಮ್: ಇರಾನ್ ವೈಮಾನಿಕ ದಾಳಿಯಿಂದ ಗಲಭೆಗೆ ತುತ್ತಾಗಿರುವ ಯೆಮನ್ ನಿಂದ ಮಲೆಯಾಳಿಗನ್ನೂ ಒಳಗೊಂಡಂತೆ ಭಾರತೀಯರನ್ನು ವಿಮಾನದ ಮೂಲಕ ಕರೆತರುವ ಸಾಧ್ಯತೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿ ಒಮನ್ ಚ್ಯಾಂಡಿ ಅವರಿಗೆ ತಿಳಿಸಿದ್ದಾರೆ.
ಭಾರತೀಯರನ್ನು ರಕ್ಷಿಸಲು ಯೆಮನ್ ಗೆ ಈಗಾಗಲೇ ಎರಡು ಹಡುಗಳನ್ನು ಕಳುಹಿಸಲಾಗಿದೆ. ಆದರೆ ಈ ಹಡಗುಗಳು ಅಲ್ಲಿಗೆ ತಲುಪಲು ಐದು ದಿನ ಹಿಡಿಯುತ್ತದೆ. ಇಂತಹ ಸನ್ನಿವೇಶದಲ್ಲಿ ವಿಮಾನದ ಮೂಲಕ ಭಾರತೀಯರನ್ನು ಕರೆತರಲು ಸೌದಿ ಸರ್ಕಾರವನ್ನು ಮನವಿ ಮಾಡಿದ್ದೇವೆ ಎಂದು ಕೇಂದ್ರ ಸಚಿವೆ ತಿಳಿಸಿದ್ದಾರೆ ಎಂದು ಅಧಿಕೃತವಾಗಿ ಬಿಡುಗಡೆಯಾದ ಹೇಳಿಕೆ ತಿಳಿಸಿದೆ.
ಯೆಮನ್ ನಲ್ಲಿ ನೆಲೆಸಿರುವ ಹಲವಾರು ಮಲೆಯಾಳಿ ಕುಟುಂಬ ಸದಸ್ಯರ ಜೊತೆ ಒಮನ್ ಚ್ಯಾಂಡಿ ಮಾತನಾಡಿದ್ದಾರೆ. ಹಲವರ ಪಾಸ್ಪೋರ್ಟ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಯೆಮೆನ್ ನ ಭಾರತೀಯ ರಾಯಭಾರಿ ಕಛೇರಿ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿಕೆ ತಿಳಿಸಿದೆ.
"ಅವರು ಪಾಸ್ಪೋರ್ಟ್ ಗಳನ್ನು ಹಿಂದಕ್ಕೆ ಪಡೆಯದೆ ಹೋದರೆ, ವಾಪಸ್ ಬರಲು ವಿಶೇಶ ಪಾಸ್ ಗಳನ್ನು ಅವರಿಗೆ ನೀಡಲಾಗುವುದು. ನಂತರ ಮತ್ತೊಂದು ಪಾಸ್ಪೋರ್ಟ್ ನೀಡಲಾಗುವುದು" ಎಂದು ಹೇಳಿಕೆ ತಿಳಿಸಿದೆ.
ಯೆಮೆನ್ ನಲ್ಲಿ ಎಲ್ಲ ಮಲೆಯಾಳಿ ಕುಟುಂಬಗಳು ಸುರಕ್ಷಿತವಾಗಿವಿ ಎಂದು ಹೇಳಿಕೆ ತಿಳಿಸಿದೆ.