ನವದೆಹಲಿ: ಯೆಮನ್ ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ಭಾರತೀಯ ನೌಕಾದಳದ ಯುದ್ಧ ಹಡಗುಗಳು ಹೊರಟಿವೆ ಎಂದು ನೌಕಾದಳದ ಮುಖಂಡ ಪಿ ಮುರುಗೇಶನ್ ತಿಳಿಸಿದ್ದಾರೆ.
"ರಕ್ಷಣೆ ಕಾರ್ಯಾಚರಣೆ ವೈಮಾನಿಕ ಹಾಗೂ ಸಮುದ್ರರ ಮೂಲಕ ಒಟ್ಟಿಗೆ ನಡೆಯಲಿದೆ. ಇದಕ್ಕೆ ಭಾರತೀಯ ನೌಕಾದಳ, ಐ ಎ ಎಫ್ ಮತ್ತು ಏರ್ ಇಂಡಿಯಾ ಸಹಕರಿಸಲಿದ್ದಾರೆ" ಎಂದು ಮುರುಗೇಶನ್ ತಿಳಿಸಿದ್ದಾರೆ.
ಅಂತರ ಸಚಿವರ ಸಭೆಯಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು ಇದರ ಅಧ್ಯಕ್ಷತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಹಿಸಿದ್ದರು ಎಂದು ಅವರು ಸೋಮವಾರ ತಿಳಿಸಿದ್ದಾರೆ.
ಮೂರು ನೌಕಾದಳದ ಯುದ್ಧ ಹಡಗುಗಳು ಹಾಗೂ ಎರಡು ಪ್ರಯಾಣಿಕ ಹಡಗುಗಳನ್ನು ಕಳುಹಿಸಲಾಗುವುದು. ಭಾರತೀಯ ವಾಯುಸೇನೆ ಎರಡು ವಿಮಾನಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಯೋಜನೆಯ ವಿವರಗಳನ್ನು ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ರಾಜ್ಯ ಮಂತ್ರಿ ಜನರಲ್ ವಿ ಕೆ ಸಿಂಗ್ ಇಂದು ಸಂಜೆ ಜಿಬೌಟಿಗೆ ತೆರಳಲಿದ್ದು ರಕ್ಷಣಾ ಕಾರ್ಯಾಚರಣೆಯ ಮುಂದಾಳತ್ವ ವಹಿಸಲಿದ್ದಾರೆ. ಈಗಾಗಲೇ ಓಮನ್ ನಲ್ಲಿ ಏರ ಇಂಡಿಯಾ ಎರಡು ವಿಮಾನಗಳನ್ನು ಇಳಿಸಿದೆ.
ಯೆಮನ್ ನಲ್ಲಿ ಸುಮಾರು ೪೦೦೦ ಭಾರತೀಯರು ಸಿಲುಕಿದ್ದು ಅದರಲ್ಲಿ ಸುಮಾರು ಅರ್ಧದಷ್ಟು ಜನ ನರ್ಸ್ ಗಳು.