ಜಮ್ಮು: ಈ ವರ್ಷ ಜಮ್ಮು ಕಾಶ್ಮೀರಕ್ಕೆ ಅತ್ಯಧಿಕ ಪ್ರವಾಸಿಗರನ್ನು ಸೆಳೆಯಲು ಜಮ್ಮು ಕಾಶ್ಮೀರ ಪ್ರವಾಸೋದ್ಯಮ ಶ್ರಮಿಸಲಿದೆ, ಅದರಲ್ಲೂ ಜಮ್ಮು ಪ್ರದೇಶ ಕಾಶ್ಮೀರದಷ್ಟೇ ಸುಂದರವಾಗಿದ್ದರೂ ಎಷ್ಟೋ ಪ್ರದೇಶಗಳು ಇನ್ನು ಪ್ರಸಿದ್ಧ ತಾಣಗಳಾಗಿಲ್ಲ ಎಂದು ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯ್ಯದ್ ಇಂದು ತಿಳಿಸಿದ್ದಾರೆ.
ಜಮ್ಮುವನ್ನು ಪ್ರತ್ಯೇಕ ಪ್ರವಾಸಿ ತಾಣವಾಗಿಯೂ ಪ್ರಚಾರ ಮಾಡುವತ್ತ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಹಾಗು ಪಿಡಿಪಿ-ಬಿಜೆಪಿ ಪಕ್ಷ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಂತೆ ಈ ಪ್ರದೇಶದ ದಾರ್ಗ ಪರಂಪರೆಯ ಬಗ್ಗೆ ವಿಶೇಷ ಗಮನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
"ಜಮ್ಮುವಿನ ಪ್ರವಾಸೋದ್ಯಮ ಸಾಮರ್ಥ್ಯ ಕಾಶ್ಮೀರದಷ್ಟೇ ಇದೆ" ಎಂದಿದ್ದಾರೆ ಮುಫ್ತಿ.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ "ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ನಮೂದಿಸಿರುವಂತೆ ಜಮ್ಮುವಿನ ದಾರ್ಗಾ ಪರಂಪರೆಯನ್ನು ಮುನ್ನಲೆಗೆ ತರಲು ಶ್ರಮಿಸಲಾಗುವುದು" ಎಂದಿದ್ದಾರೆ.
"ಪರಂಪರೆ ಪ್ರವಾಸೋದ್ಯಮವನ್ನು ಹೊರತುಪಡಿಸಿ, ಜಮ್ಮುವಿನ ಗಡಿಯ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಕೂಡ ನಾವು ದೊಡ್ಡ ಮಟ್ಟದಲ್ಲಿ ಶೋಧಿಸಬೇಕಿದೆ" ಎಂದಿದ್ದಾರೆ ಅವರು.