ನವದೆಹಲಿ: ಸೋನಿಯಾ ಗಾಂಧಿಯನ್ನು ಟೀಕಿಸುವಾಗ ನೈಜೀರಿಯಾ ಮಹಿಳೆಯನ್ನು ಉದಾಹರಿಸಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನೈಜೀರಿಯಾ ರಾಯಭಾರಿ ಕಚೇರಿ ಕ್ಷಮೆ ಯಾಚನೆಗೆ ಒತ್ತಾಯಿಸಿದೆ.
ಪ್ರತಿಕ್ರಿಯೆ ಬಹಳ ಕೆಟ್ಟ ರುಚಿಯುಳ್ಳದ್ದಾದರಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆ ದೂರು ಕೂಡ ನೀಡುವ ಸಾಧ್ಯತೆ ಇದೆ ಎಂದು ನೈಜೀರಿಯಾ ರಾಯಭಾರಿ ಒ ಬಿ ಆಕೋಂಗರ್ ಹೇಳಿದ್ದಾರೆ.
"ಸಚಿವರು ಕೂಡಲೆ ತಮ್ಮ ಪ್ರತಿಕ್ರಿಯೆಗಳನ್ನು ಹಿಂತೆಗೆದುಕೊಂಡು, ನೈಜೀರಿಯಾ ಜನರ ಕ್ಷಮೆ ಯಾಚಿಸಬೇಕು ಎಂಬುದನ್ನು ನಿರೀಕ್ಷಿಸುತ್ತೇವೆ. ನಮ್ಮ ಸರ್ಕಾರಕ್ಕೂ ಇದನ್ನು ಸೂಚಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಒಪ್ಪಿಕೊಂಡಿದ್ದು ಅವರ ಬಿಳಿ ಚರ್ಮಕ್ಕಾಗಿ ಎಂದು ಗಿರಿರಾಜ್ ಪ್ರತಿಕ್ರಿಯಿಸಿ ವಿವಾದ ಸೃಷ್ಟಿಸಿದ್ದರು.
"ರಾಜೀವ್ ಗಾಂಧಿ ನೈಜೀರಿಯನ್ ಮಹಿಳೆಯನ್ನು ಮದುವೆಯಾಗಿದ್ದು ಅವರಿಗೆ ಬಿಳಿ ಚರ್ಮ ಇರದೇ ಹೋಗಿದ್ದರೆ ಕಾಂಗ್ರೆಸ್ ಅವರ ನಾಯಕತ್ವ ಒಪ್ಪಿಕೊಳ್ಳುತ್ತಿತ್ತೇ?" ಎಂದು ಕಿರು, ಸಣ್ಣ ಉದ್ದಿಮೆಗಳ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಬಿಹಾರದ ಹಜಿಪುರದಲ್ಲಿ ಮಂಗಳವಾರ ಹೇಳಿದ್ದರು.
ವಿವಿಧ ಪಕ್ಷಗಳ ಮಹಿಳಾ ರಾಜಕಾರಿಣಿಗಳು ಕೂಡ ಈ ಪ್ರತಿಕ್ರಿಯೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಿರಿರಾಜ್ ಅವರನ್ನು ಸಂಪುಟದಿಂದ ಕೂಡಲೇ ವಜಾ ಮಾಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.