ಖಟ್ಮಂಡು: ಭೂಕಂಪ ಪೀಡಿತ ನೇಪಾಳಕ್ಕೆ ಸಹಾಯ ಮಾಡಲು ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ಬುಕ್ ತನ್ನ ಬಳಕೆದಾರರಿಂದ ಎರಡು ದಿನಗಳಲ್ಲಿ ೧೦ ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ.
ಏಪ್ರಿಲ್ ೨೫ರಂದು ಸಂಭವಿಸಿದ ರಿಕ್ಟರ್ ಮಾಪನ ದಾಖಲು ಮಾಡಿದಂತೆ ೭.೯ ಅಂಶದ ತೀವ್ರ ಭೂಕಂಪನದಿಂದ ಹಿಮಾಲಯದ ದೇಶದಲ್ಲಿ ಸುಮಾರು ೬೦೦೦ ಜನ ಮೃತಪಟ್ಟು ೧೦ ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
"ಪ್ರಾದೇಶಿಕ ಪರಿಹಾರ ನಿಧಿಗೆ ದೇಣಿಗೆ ನೀಡಲು ನಮ್ಮ ಬಳಕೆದಾರರಿಗೆ ಫೇಸ್ಬುಕ್ ನಲ್ಲಿ ಅವಕಾಶ ನೀಡಿದೆವು. ಎರಡು ದಿನಗಳಲ್ಲಿ ೫ ಲಕ್ಷಕ್ಕೂ ಹೆಚ್ಚು ಜನ ದೇಣಿಗೆ ನೀಡಿದ್ದು ಅಂತರಾಷ್ಟ್ರೀಯ ಮಾಧ್ಯಮ ಪರಿಹಾರ ನಿಧಿಗೆ ೧೦ ಮಿಲಿಯನ್ ಡಾಲರ್ರಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದೇವೆ" ಎಂದು ಫೇಸ್ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜ್ಯೂಕರ್ ಬರ್ಗ್ ಪೋಸ್ಟ್ ಮಾಡಿದ್ದಾರೆ.
"ತೊಂದರೆಗೀಡಾದ ಪ್ರದೇಶಗಳ ಪರಿಹಾರ ಕಾರ್ಯಕ್ಕೆ ಫೇಸ್ಬುಕ್ ಕೂಡ ೨ ಮಿಲಿಯನ್ ಡಾಲರ್ ದೇಣಿಗೆ ನೀಡಲಿದೆ" ಎಂದು ಅವರು ತಿಳಿಸಿದ್ದಾರೆ.
ಇದೂ ಅಲ್ಲದೆ ಈ ಜನಪ್ರಿಯ ಸಾಮಾಜಿಕ ಜಾಲತಾಣ ನೇಪಾಳದಲ್ಲಿ ಸುರಕ್ಷಿತವಾಗಿ ಇರುವವರಿಗೆ ಅದನ್ನು ತಿಳಿಸಲು ಸೇಫ್ಟಿ ಫೀಚರ್ ಅನ್ನು ಕೂಡ ಫೇಸ್ಬುಕ್ ನಲ್ಲಿ ನೀಡಿತ್ತು.
ವಿಪತ್ತಿನ ಸಮಯದಲ್ಲಿ ಸಮುದಾಯಗಳು ಸಹಾಯಕ್ಕೆ ಒಟ್ಟಾಗಿ ಸೇರುವುದನ್ನು ನೋಡಲು ಸಂತಸವಾಗುತ್ತದೆ ಎಂದಿದ್ದಾರೆ ಫೇಸ್ಬುಕ್ ಸಿಇಒ.