ಪ್ರಧಾನ ಸುದ್ದಿ

ಸರ್ಕಾರ 'ಭಾಗ್ಯ'ಗಳಮೂಲಕ ಗರೀಭಿ ಹಠಾವೊ ಮಾಡಲು ಹೊರಟಂತಿದೆ: ಕೃಷ್ಣ

Lingaraj Badiger

ಬೆಂಗಳೂರು: ರಾಜ್ಯ ಸರ್ಕಾರ ಜನರಿಗೆ ಹಲವು ಭಾಗ್ಯಗಳನ್ನು ನೀಡುವ ಮೂಲಕ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಗರೀಭಿ ಹಠಾವೊ ಮಾಡಲು ಹೊರಟಂತೆ ಇದೆ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹೇಳಿದ್ದಾರೆ.

ತಮ್ಮ 84ನೇ ಜನ್ಮ ದಿನದ ಅಂಗವಾಗಿ ಸದಾಶಿವನಗರದ ನಿವಾಸದಲ್ಲಿ ಆಯೋಜಿಸಿದ್ದ ಚಹಾಕೂಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿದಾಗ, 'ಅವರು ಹಲವು ಭಾಗ್ಯಗಳನ್ನು ಕೊಟ್ಟಿದ್ದಾರೆ. ಅದು ಇಂದಿರಾ ಗಾಂಧಿಯವರ ಗರೀಭಿ ಹಠಾವೊ ಮಾಡಲು ಹೊರಟಂತಿದೆ' ಎಂದರು.

ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಆಂತರಿಕ ಮತ್ತು ಸಾರ್ವಜನಿಕ ಮೌಲ್ಯಮಾಪನ ಅಗತ್ಯ ಎಂದ ಕೃಷ್ಣ, ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವರ ಮೌಲ್ಯಮಾಪನ ಮಾಡಿದ್ದೆ. ಒಬ್ಬೊಬ್ಬರದ್ದು ಒಂದೊಂದು ಕಾರ್ಯಶೈಲಿ. ನನ್ನ ಶೈಲಿಯನ್ನು ಇನ್ನೊಬ್ಬರ ಮೇಲೆ ಹೇರಲಾಗದು. ಹಾಲಿ ಸಚಿವರ ಕಾರ್ಯ ವಿಧಾನವನ್ನು ಪರಾಮರ್ಶೆಗೆ ಒಳಪಡಿಸುವುದು ಸಿಎಂ ಅವರಿಗೆ ಸಂಬಂಧಿಸಿದ ಸಂಗತಿಯಾಗಿದೆ ಎಂದರು.

ಸರ್ಕಾರ ಎರಡು ವರ್ಷ ಪೂರೈಸಿದಾಗ ಅದರ ಪರಾಮರ್ಶೆ ಆಗಬೇಕಾಗುತ್ತದೆ. ಅದು ಯಾವ ರೂಪದಲ್ಲಾಗಲಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಯಾಕೆಂದರೆ ಕಾಂಗ್ರೆಸ್‌ಗೆ ತನ್ನದೇ ಆದ ರೀತಿ. ನೀತಿಗಳಿವೆ. ಹೀಗಾಗಿ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವುದು ನಮ್ಮ ಅಧ್ಯಕ್ಷಕರಿಗೆ ಬಿಟ್ಟಿದ್ದಾಗಿದೆ ಎಂದು ಸುದ್ದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಇನ್ನು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಒತ್ತಡವಿರುವ ಬಗ್ಗೆ ಏನೇಳುತ್ತೀರಿ ಎಂದಾಗ, 'ನಾನು ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಓದುತ್ತಿದ್ದೇನೆ' ಎಂದಷ್ಟೇ ಪ್ರತ್ರಿಕಿಯಿಸಿದರು. ಸಕ್ರಿಯ ರಾಜಕಾರಣಕ್ಕೆ ಮರಳುತ್ತೀರಾ ಎಂಬ ಪ್ರಶ್ನೆಗೆ, ಕಾಲವೇ ಉತ್ತರಿಸಬೇಕು ಎಂದರು.

SCROLL FOR NEXT