ಚೆನ್ನೈ/ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಶಾಹ್ರ್ಯಾರ್ ಖಾನ್ ಅವರ ಭಾರತದ ಮಿತ ಕಾಲಾವಧಿ ಪ್ರವಾಸ ಈ ಎರಡು ವಿರೋಧಿ ರಾಷ್ಟ್ರಗಳ ಕ್ರಿಕೆಟ್ ಸರಣಿಯ ಭರವಸೆಯನ್ನು ಮರುಕಳಿಸಿದೆ. ಭಾನುವಾರ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರನ್ನು ಭೇಟಿ ಮಾಡಿದ ಖಾನ್ ಡಿಸೆಂಬರ್ ನಲ್ಲಿ ಅಬು ದಾಭಿಯಲ್ಲಿ ಭಾರತ ಮತ್ತು ಪಾಕಿಸ್ತಾನ ೧೦ ಪಂದ್ಯಗಳನ್ನು ಆಡಲಿವೆ ಎಂದು ತಿಳಿಸಿದ್ದಾರೆ.
೨೦೦೮ ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಈ ಎರಡು ದೇಶಗಳು ಭಾರತದಲ್ಲಿ ಮುಖಾಮುಖಿಯಾಗಿರುವದು ಕೇವಲ ೩ ಪಂದ್ಯಗಳಲ್ಲಿ ಮಾತ್ರ. ಅದು ೨೦೧೨ರಲ್ಲಿ. ಇದರ ಹೊರತು ಎರಡು ದೇಶಗಳ ನಡುವಿನ ಸರಣಿಗಳು ನಡೆದೇ ಇಲ್ಲ.
೨೦೧೪ ರಲ್ಲೇ ಐಸಿಸಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಯೋಜನೆಯಾಗಿತ್ತು ಅಬುಧಾಬಿ ಸರಣಿ. ಎರಡು ಕ್ರಿಕೆಟ್ ಬೋರ್ಡ್ ಗಳು ಒಪ್ಪಿಗೆ ನೀಡಿದ್ದರು ಇದಕ್ಕೆ ಸರ್ಕಾರದ ಅನುಮತಿ ಬೇಕಾಗಿದ್ದು, ಭಾನುವಾರದವರೆಗೂ ಯಾವುದೇ ಹಸಿರು ನಿಶಾನೆ ಬಂದಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಕ್ರಿಕೆಟ್ ರಾಜನೀತಿಯನ್ನು ಮುಂದುವರೆಸಲು ಸರ್ಕಾರ ಒಪ್ಪಿಗೆ ನೀಡಲಿದೆ ಎನ್ನಲಾಗಿದೆ.
ತಮ್ಮ ಸ್ವಗೃಹದಲ್ಲಿ ಖಾನ್ ಅವರೊಂದಿಗೆ ಮಾತನಾಡಿದ ದಾಲ್ಮಿಯಾ " ಈ ಸರಣಿಯನ್ನು ಮತ್ತೆ ಪ್ರಾರಂಭಿಸುವ ಭರವಸೆ ಇದೆ. ಕೆಲವು ವಿಷಯಗಳು ಬಗೆಹರಿಯಬೇಕು ಹಾಗು ಸರ್ಕಾರ ಮತ್ತು ಸಚಿವಾಲಯದ ಬೆಂಬಲ ಇಲ್ಲದೆ ಮುಂದುವರೆಯುವುದು ಸಾಧ್ಯವಿಲ್ಲ" ಎಂದಿದ್ದಾರೆ.
ಸೋಮವಾರ ಖಾನ್ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದ್ದು, ಇದು ಫಲಪ್ರದವಾಗಬಹುದು ಎಂಬುದು ಮೂಲಗಳ ಊಹೆ.