ನವದೆಹಲಿ: ನರೇಂದ್ರ ಮೋದಿ ಆಡಳಿತದ ಕೇಂದ್ರ ಸರ್ಕಾರದ ಭೂಸ್ವಾಧೀನ ಸುಘ್ರೀವಾಜ್ಞೆ ಕಾಯ್ದೆಯ ವಿರುದ್ಧ ಸೋಮವಾರ ಕಾಂಗ್ರೆಸ್ ಪಕ್ಷ ನವದೆಹಲಿಯಲ್ಲಿ ಪ್ರಭಾತ್ ಫೇರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಅಂಗವಾಗಿ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಲು ಬೆಂಬಲ ಕೋರಿ ಸಂಸತ್ ಸದಸ್ಯರ ಮನೆ ಮನೆಗೆ ಯುವ ಕಾಂಗ್ರೆಸ್ ತೆರಳಲಿದೆ.
ಬಜೆಟ್ ಸೆಶನ್ ನ ಕೊನೆಯ ದಿನವಾದ ಬುಧವಾರ ಈ ಕಾಯ್ದೆಯನ್ನು ಅಂತಿಮವಾಗಿ ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂಬ ಊಹೆಗಳ ನಡುವೆ ಕಾಂಗ್ರೆಸ್ ನಡೆ ಇಟ್ಟಿದೆ.
ಅಲ್ಲದೆ ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಎರಡು ಮನೆಗಳ ಜಂಟಿ ಸಮಿತಿ ರಚಿಸಿ ಕಾಯ್ದೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ನಿರ್ಧರಿಸಿದೆ ಎಂಬ ಊಹಾಪೋಹ ಕೂಡ ಇದೆ.
ಇಂದು ನಡೆಯಲಿರುವ ಪ್ರಭಾತ್ ಫೇರಿ ಯನ್ನು ಕಾಂಗ್ರೆಸ್ ಯುವ ನೇತಾ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಹಿಸಲಿದ್ದಾರೆ.
"ಈ ಪ್ರಭಾತ್ ಫೇರಿ ವೇಳೆ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ವೈಯಕ್ತಿಕವಾಗಿ ಸಂಸತ್ ಸದಸ್ಯರನ್ನು ಭೇಟಿ ಮಾಡಿ ಭೂಸ್ವಧೀನ ಕಾಯ್ದೆಯ ವಿರೋಧಕ್ಕೆ ಬೆಂಬಲ ಕೇಳಿ ಮನವಿ ಮಾಡಲಿದ್ದಾರೆ" ಎಂದು ಪಕ್ಷ ತಿಳಿಸಿದೆ.
ಯಾವುದೇ ಪಕ್ಷವಾಗಿದ್ದರೂ ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತುವಂತೆ ಕಾಂಗ್ರೆಸ್ ಮನವಿ ಮಾಡಿದೆ.