ಜೈಪುರ: ನಾಗಪುರ ಜಿಲ್ಲೆಯ ದಂಗವಾಸ್ ನ ಪ್ರಬಲ ಮೇಲ್ಜಾತಿ ಸಮುದಾಯದ ಜಾಟ್ ಗಳು ಮೂವರು ದಲಿತರ ಮೇಲೆ ಟ್ರಾಕ್ಟರ್ ಓಡಿಸಿ ಕೊಂದು ಹಲವರನ್ನು ಗಾಯಗೊಳಿಸಿರುವ ಘಟನೆ ನಡೆದಿದೆ. ಈ ಗಲಭೆ ಹಳೆಯ ಭೂವಿವಾದಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ. ೨೦ ಹೆಕ್ಟೇರ್ ಭೂಮಿಯ ಒಡೆತನದ ಬಗ್ಗೆ ದಲಿತರಿಗೂ ಹಾಗು ಚಿನ್ಮರಣ್ ಜಾಟ್ ನಡುವೆ ವಿವಾದವಿತ್ತು ಎನ್ನಲಾಗಿದೆ.
"ದಾಳಿ ಮಾಡಿದ ೨೦೦ ಜನರಲ್ಲಿ ೧೩ ಜರನ್ನು ಗುರುತಿಸಿದ್ದೇವೆ, ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ" ಎಂದು ಗಾಯಗೊಂಡ ವ್ಯಕ್ತಿಯೊಬ್ಬನ ಸಹೋದರ ಕಿಶನ್ ಮೇಘ್ವಾಲ್ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ತಿಳಿಸಿದ್ದಾನೆ. "ದಶಕಗಳಿಂದ ಜಾಟ್ ಸಮುದಾಯದ ಕ್ರೌರ್ಯ ಮತ್ತು ದೌರ್ಜನ್ಯಗಳಿಂದ ನೊಂದಿದ್ದೇವೆ" ಎಂದು ಕೂಡ ಅವರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡುಹೋದಾಗ ದಾಳಿಕೋರರು ಆಸ್ಪತ್ರೆಗೆ ಅಡ್ಡಗಟ್ಟಿ ವೈದ್ಯರು ಅವರಿಗೆ ಚಿಕಿತ್ಸೆ ನೀಡದಂತೆ ತಡೆದಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಇದರಿಂದ ಭಯಭೀತರಗಿರುವ ನೂರಾರು ದಲಿತರು ಜೀವ ಉಳಿಸಿಕೊಳ್ಳಲು ಆ ಪ್ರದೇಶದಿಂದ ಓಡಿಹೋಗಿದ್ದಾರೆ ಎಂದು ಕೂಡ ತಿಳಿದುಬಂದಿದೆ.