ಪ್ರಧಾನ ಸುದ್ದಿ

ಇಂಧನ ಬೆಲೆ ಏರಿಕೆ; ಮೋದಿ ಸರ್ಕಾರದ ವಾರ್ಷಿಕೋತ್ಸವ ಉಡುಗೊರೆ: ಕಾಂಗ್ರೆಸ್

Guruprasad Narayana

ನವದೆಹಲಿ: ನೆನ್ನೆ ಮಧ್ಯರಾತ್ರಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿರುವುದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಇದು ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ತುಂಬುತ್ತಿರುವ ಸಮಯದಲ್ಲಿ ಅವರು ನೀಡಿರುವ ವಾರ್ಷಿಕೋತ್ಸವ ಉಡುಗೊರೆ ಎಂದು ಕುಹಕವಾಡಿದೆ. ಬದಲಾಗಿ ಅಬಕಾರಿ ಮತ್ತು ಆಮದು ಸುಂಕವನ್ನು ನಾಲ್ಕು ಪಟ್ಟು ಏರಿಸಿರುವುದನ್ನು ಹಿಂತೆಗೆದುಕೊಂಡು ಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಆಗ್ರಹಿಸಿದೆ.

"ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳನ್ನು ಹೆಚ್ಚಿಸಿ ಸಾಮಾನ್ಯ ಮನುಷ್ಯನಿಗೆ ಹೊರೆ ಮಾಡುವ ಬದಲು ಅಬಕಾರಿ ಮತ್ತು ಆಮದು ಸುಂಕವನ್ನು ನಾಲ್ಕು ಪಟ್ಟು ಏರಿಸಿರುವುದನ್ನ ಹಿಂತೆಗೆದುಕೊಂಡು ವರ್ಷಕ್ಕೆ ೯೦,೦೦೦ ಕೋಟಿ ಸಂಗ್ರಹಿಸಬಹುದು" ಎಂದು ಕಾಂಗ್ರೆಸ್ ಪಕ್ಷದ ಸಂವಹನ ಇಲಾಖೆಯ ಮುಖ್ಯಸ್ಥ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.

೧೫ ದಿನಗಳಲ್ಲಿ ಎರಡು ಬಾರಿ ಪೆಟ್ರೋಲ್-ಡೀಸೆಲ್ ಬೆಳಯನ್ನು ಏರಿಸಿ ಸಾಮಾನ್ಯ ಮನುಷ್ಯನಿಗೆ ಹಾಗೂ ರೈತರಿಗೆ ದೊಡ್ಡ ಹೊಡೆತ ನೀಡಿದ್ದಾರೆ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆನ್ನೆ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆ ೩.೧೩ ರೂ ಹಾಗೂ ಡೀಸೆಲ್ ಬೆಲೆ ೨.೭೧ ರೂ ಹೆಚ್ಚಾಗಿದ್ದು ಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದೆ.

SCROLL FOR NEXT