ನವದೆಹಲಿ: ದೆಹಲಿಯ ನೂತನ ಪ್ರಧಾನ ಕಾರ್ಯದರ್ಶಿ ಹುದ್ದೆ ನೇಮಕಾತಿ ವಿಷಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ನಡುವಿನ ಕಾಳಗ ತಾರಕಕ್ಕೇರಿದೆ. ಜಂಗ್ ಅವರು ಶಕುಂತಲಾ ಗ್ಯಾಮ್ಲಿನ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಿಸಿರುವುದನ್ನು ಕೇಜ್ರಿವಾಲ್ ಅಸಂವಿಧಾನಕ ಎಂದಿದ್ದಾರೆ.
ಕೆ ಕೆ ಶರ್ಮ, ಈ ಅತ್ಯುನ್ನತ ಅಧಿಕಾರಶಾಹಿ ಹುದ್ದೆಯನ್ನು ತೊರೆದ ಮೇಲೆ ಅವರ ನಂತರದ ಹಿರಿಯ ಅಧಿಕಾರಿ ಗ್ಯಾಮ್ಲಿನ್ ಅವರನ್ನು ಜಂಗ್ ನೇಮಕ ಮಾಡಿದ್ದರು. ಇದು ದೆಹಲಿ ಸರ್ಕಾರಕ್ಕೆ ಇರುಸುಮುರುಸು ತಂದಿದೆ.
"ಯಾವುದೇ ಪ್ರಚೋದನೆ ಇದ್ದರೂ, ಚುನಾಯಿತ ಸರ್ಕಾರವನ್ನು ಕಡೆಗಣಿಸಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಲು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸಂವಿಧಾನದಲ್ಲಿ ಯಾವುದೇ ವಿಶೇಷ ಅಧಿಕಾರ ಇಲ್ಲ" ಎಂದು ಸರ್ಕಾರ ದೂರಿದೆ. ಗ್ಯಾಮ್ಲಿನ್ ಅವರ ವರ್ತನೆ ಬಗ್ಗೆ ಪ್ರಶ್ನೆಗಳಿದ್ದರೂ ಅವರನ್ನು ನೇಮಿಸಿರುವುದರ ಬಗ್ಗೆ ಸರ್ಕಾರ ಕಿಡಿ ಕಾರಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಜಂಗ್ ತಾವು ಕಾನೂನುಬದ್ಧವಾಗಿಯೇ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ೧೯೮೪ನೆ ಸಾಲಿನ ಐ ಎ ಎಸ್ ಅಧಿಕಾರಿ ಗ್ಯಾಮ್ಲಿನ್ ಅವರಿಗೆ ಹುದ್ದೆಯ ರೇಸಿನಿಂದ ಹಿಂದೆ ಸರಿಯುವಂತೆ ಹಿರಿಯ ಅಧಿಕಾರಿಗಳಿಂದ ತೀವ್ರ ಒತ್ತಡವಿದೆ ಎಂದು ಜಂಗ್ ಅವರಿಗೆ ಪತ್ರ ಬರೆದ ಕೆಲವೇ ಘಂಟೆಗಳಲ್ಲಿ ಅವರನ್ನು ಈ ಉನ್ನತ ಹುದ್ದೆಗೆ ನೇಮಿಸಿದ್ದಾರೆ ಎಂದು ತಿಳಿದುಬಂದಿದೆ.