ನವದಹಲಿ: ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ತಿಳಿಸಿದ್ದಾರೆ.
ಜುಲೈ ವೇಳೆಗೆ ಬಿಹಾರ ಮತದಾರರ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕ ಅಂತಿಮಗೊಳಿಸುವ ಪ್ರಕ್ರಿಯೆ ಇನ್ನೂ ಮುಕ್ತಾಯವಾಗಿಲ್ಲ, ಹವಾಮಾನ, ಪರೀಕ್ಷೆ ಹಾಗೂ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯಗೆಗಳನ್ನು ಮುಂದಿಟ್ಟುಕೊಂಡು ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದು ನಸೀಮ್ ಜೈದಿ ಮಾಹಿತಿ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಬಿಹಾರದಲ್ಲಿ ಹಣದ ದುರುಪಯೋಗ ನಡೆಯುವ ಸಾಧ್ಯತೆ ದಟ್ಟವಾಗಿರುವುದರಿಂದ ಈ ಬಾರಿ ವ್ಯವಸ್ಥಿವಾಗಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಚುನಾವಣಾ ಆಯೋಗ ಗುರುತಿಸುವ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಿ ಶಾಂತಿಯುತ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿಕೊಳ್ಳುತ್ತಿದೆ.
ಜೆಡಿಯು ಹಾಗೂ ಆರ್.ಜೆ.ಡಿ ಈ ಬಾರಿಯಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿರುವ ಹಿನ್ನಲೆಯಲ್ಲಿ ಎಂದಿಗಿಂತಲೂ ಈ ಬಾರಿಯಾ ಚುನಾವಣೆ ತೀವ್ರ ಕುತೂಹಲಕಾರಿಯಾಗಿರಲಿದೆ.