ಕೊಚ್ಚಿ: ಮಹತ್ವದ ತೀರ್ಪೊಂದರಲ್ಲಿ ಕೇರಳ ಉಚ್ಛ ನ್ಯಾಯಾಲಯ, ಮಾವೋವಾದಿಯಾಗಿರುವುದು ಅಪರಾಧವಲ್ಲ. ಮಾವೋವಾದಿ ಎಂದು ಪೊಲೀಸರು ವ್ಯಕ್ತಿಯನ್ನು ಬಂಧಿಸುವಂತಿಲ್ಲ ಎಂದು ತೀರ್ಪು ನೀಡಿದೆ.
"ನಮ್ಮ ಸಾಂವಿಧಾನಿಕ ರಾಜಕೀಯಕ್ಕೆ ಮಾವೋವಾದಿ ರಾಜಕೀಯ ಸಿದ್ಧಾಂತಗಳು ಹೊಂದಾಣಿಕೆಯಾಗುವುದಿಲ್ಲವಾದರೂ ಮಾವೋವಾದಿಯಾಗಿರುವುದು ಅಪರಾಧವಲ್ಲ. ಮನುಷ್ಯನ ಅಭಿಲಾಶೆಗಳ ಮೇರೆಗೆ ಚಿಂತಿಸುವುದು ಮನುಷ್ಯನ ಮೂಲ ಹಕ್ಕು" ಎಂದು ಕೋರ್ಟ್ ತಿಳಿಸಿದೆ.
"....ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಹಿಂಸಾಚಾರಕ್ಕೆ ಇಳಿದರೆ ಆಗ ಆ ವ್ಯಕ್ತಿಯ ವಿರುದ್ಧ ಅಥವಾ ಸಂಸ್ಥೆಯ ವಿರುದ್ದ ಕ್ರಮ ಕೈಗೊಳ್ಳಬಹುದು" ಎಂದು ಮಾವೋವಾದಿ ಎಂದು ಶಂಕಿಸಿ ಕೇರಳ ವಿಶೇಷ ಪಡೆ ಶ್ಯಾಮ್ ಬಾಲಕೃಷ್ಣ ಅವರನ್ನು ಬಂಧಿಸಿದ ಪ್ರಕರಣದ ವಿಚಾರಣೆ ವೇಳೆಯಲ್ಲಿ ನ್ಯಾಯಮೂರ್ತಿ ಎ ಮುಹಮ್ಮದ್ ಮುಷ್ತಾಕ್ ತೀರ್ಪು ನೀಡಿದ್ದಾರೆ.
"ತಮ್ಮ ಖಾಸಗಿ ಚಿಂತನೆಗಳು ಸಾರ್ವಜನಿಕ ಮೌಲ್ಯಗಳಿಗೆ ಧಕ್ಕೆಯುಂಟು ಮಾಡಿದಾಗ ಮಾತ್ರ ಅವುಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಬಹುದು" ಎಂದು ಕೋರ್ಟ್ ತೀರ್ಪು ನೀಡಿದೆ.
"ವ್ಯಕ್ತಿಯ ಚಟುವಟಿಕೆಗಳು ಕಾನೂನು ಬಾಹಿರ ಎಂಬುದಕ್ಕೆ ಸಕಾರಣಗಳಿಂದ ಅಭಿಪ್ರಾಯ ರೂಪಿಸದ ಹೊರತು ಮಾವೋವಾದಿ ಎಂಬ ಕಾರಣಕ್ಕೆ ಪೊಲೀಸರು ವ್ಯಕ್ತಿಯನ್ನು ಬಂಧಿಸುವಂತಿಲ್ಲ" ಎಂದು ಇದಕ್ಕೆ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ ಎಂದೂ ಕೂಡ ತಿಳಿಸಿದ್ದಾರೆ.
ಬಾಲಕೃಷ್ಣ ಅವರ ಪ್ರಕರಣವನ್ನು ವಜಾ ಮಾಡಿದ ಕೋರ್ಟ್ ಎರಡು ತಿಂಗಳ ಒಳಗೆ ಅವರಿಗೆ ೧ ಲಕ್ಷ ರೂ ಪರಿಹಾರ ನೀಡುವಂತೆ ಕೂಡ ತಿಳಿಸಿದೆ. ಇದಲ್ಲದೆ ದಾವೆ ಶುಲ್ಕ ೧೦ ಸಾವಿರ ರೂ ನೀಡಲು ಸರ್ಕಾರಕ್ಕೆ ಕೋರ್ಟ್ ಆದೇಶಿಸಿದೆ.
ಆದರೆ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಅರ್ಜಿದಾರನ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.