ನವದೆಹಲಿ: ವಿವಾದಾತ್ಮಕ ಭೂಸ್ವಾಧೀನ, ಜಿಎಸ್‍ಟಿ ವಿಧೇಯಕಕ್ಕೆ ಅಂಗೀಕಾರ ಪಡೆದೇ ತೀರುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮೋದಿ ಸರ್ಕಾರದ ವರ್ಷದ ಸಾಧನೆಯನ್ನು ಶುಕ್ರವಾರ ಮಾಧ್ಯಮದ ಮುಂದೆ ಬಿಚ್ಚಿಟ್ಟ ಅವರು, ಬಹುಚರ್ಚಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮತ್ತು ಭೂ ಸ್ವಾಧೀನ ಕಾಯ್ದೆಗೆ ಮುಂಬರುವ ಅಧಿವೇಶನದಲ್ಲಿ ಅಂಗೀಕಾರ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು. ಈ ಎರಡು ಮಸೂದೆಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅರುಣ್ ಜೇಟ್ಲಿ, ಅಭಿವೃದ್ಧಿಗೆ ತಡೆಯೊಡ್ಡುವುದೇ ಪ್ರತಿ ಪಕ್ಷಗಳ ಗುರಿಯಾದಂತಿದೆ. ಅವು ಈ ಧೋರಣೆ ಬದಲಿಸಿಕೊಳ್ಳುವುದು ಸೂಕ್ತ ಎಂದರು.
ರಕ್ಷಣಾ ಸಿಬ್ಬಂದಿಗೆ ಏಕ ಹುದ್ದೆ
ಏಕ ಪಿಂಚಣಿ ವ್ಯವಸ್ಥೆ ಜಾರಿಗೆ ನಿಸ್ಸಂದೇಹವಾಗಿ ಆದ್ಯತೆ ನೀಡುತ್ತೇವೆ. ಈ ಯೋಜನೆ ಜಾರಿಯಿಂದ ಯಾರಿಗೂ ಆರ್ಥಿಕ ನಷ್ಟವಾಗದಂತೆ ನಿಯಮ ರೂಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದೆ ಎಂದರು. ಬರುವ ದಿನಗಳಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‍ಪಿಎಸ್)ಗೆ ತೆರಿಗೆ ವಿನಾಯ್ತಿ ನೀಡುವುದು, ಹಿಂಪಡೆಯದೇ ಉಳಿದ ಠೇವಣಿ ಬಳಸಿಕೊಂಡು ಹಿರಿಯ ನಾಗರಿಕರಿಗೆ ಸಾಮಾಜಿಕ ಸುರಕ್ಷತಾ ಯೋಜನೆ ರೂಪಿಸುವುದು, ಬದರುಗಳ ಕಾರ್ಪೊರೇಟೀಕರಣ ಮತ್ತು ಗ್ರಾಮೀಣ ಮೂಲ ಸೌಲಭ್ಯ ಮತ್ತು ನೀರಾವರಿಗಾಗಿ ಹೆಚ್ಚಿನ ವಿನಿಯೋಜನೆಗೆ ಆದ್ಯತೆ ನೀಡಲಾಗುವುದು ಎಂದು ಜೇಟ್ಲಿ ಹೇಳಿದರು.
ಭೂಸ್ವಾಧೀನ ವಿಧೇಯಕ ಕಾರ್ಪೋರೇಟ್ ಕಂಪನಿಗಳ ಪರವಾಗಿಲ್ಲ. ಅಭಿವೃದ್ಧಿಗೆ ರೈತರ ಭೂಮಿ ಬೇಕು ಎನ್ನುವುದು ವಾಸ್ತವ. ಸರಿಯಾದ ಪರಿಹಾರ ನೀಡುತ್ತೇವೆ.
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ