ಬೆಂಗಳೂರು:ಮುಖ್ಯಮಂತ್ರಿಗಳು ಬರುತ್ತಾರೆ ಎಂಬ ಕಾರಣಕ್ಕೆ ವರ್ತೂರು ಕೋಡಿಯ ನೊರೆಯನ್ನು ತೆಗೆದು ಸ್ವಚ್ಛ ಮಾಡಲಾಗಿದೆ. ಇದುವರೆಗೆ ಕೋಡಿ ಹಾಗು ಪಕ್ಕದ ಕೆರೆಯಲ್ಲಿ ಕಳೆಗಿಡಗಳು ತುಂಬಿದ್ದು, ಮುಖ್ಯಮಂತ್ರಿ ಭೇಟಿಗಾಗಿಯೇ ಸ್ವಚ್ಛಗೊಳಿಸಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವರು ಶನಿವಾರ ವರ್ತೂರು ಕೋಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸ್ಥಳೀಯರು ಹೀಗೆಂದು ಅಳಲು ತೋಡಿಕೊಂಡರು.
ವರ್ತೂರು ಕೋಡಿಯಲ್ಲಿ ನೊರೆ ಬಾರದಂತೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದ್ದು, ಕೆರೆಯ ನೀರನ್ನೇ ನೊರೆಗೆ ಹಾಕಿ ನೊರೆಯ ದಟ್ಟತೆ ಕಡಿಮೆ ಮಾಡಲು ಸೂಚಿಸಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಥಳಕ್ಕೆ ಭೇಟಿ ನೀಡಿದಾಗ ಮಾತ್ರ ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಂಡಿದ್ದಾರೆ ಎಂದು ದೂರಿದರು.
ನೀವು ಇಲ್ಲಿಗೆ ಭೇಟಿ ನೀಡುವ ವಿಚಾರ ತಿಳಿದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಬಿಬಿಎಂಪಿಯ ಮಾಜಿ ಸದಸ್ಯರ ಬಳಿ ಕೇಳಿದರೆ ಶಾಸಕರ ಬಳಿ ಕೇಳಿ ಎನ್ನುತ್ತಾರೆ. ನಂತರ ಶಾಸಕರ ಬಳಿ ಕೇಳಿದರೆ ಮುಖ್ಯಮಂತ್ರಿಗಳು ಎಲ್ಲ ಕ್ರಮ ಕೈಗೊಳ್ಳುತ್ತಾರೆ ಎನ್ನುತ್ತಾರೆ. ಆದರೆ ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ಭೇಟಿಯಾಗಲು ಬಿಡುತ್ತಿಲ್ಲ ಎಂದು ಕೆಲವರು ದೂರಿದರು. ಈ ವೇಳೆ ವೈಟ್ ಫೀಲ್ಡ್ ರೈಸಿಂಗ್ ಮು ಖ್ಯಸ್ಥ ಆರ್. ಕೆ. ಮಿಶ್ರಾ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ರಾಸಾಯನಿಕ ಸಿಂಪಡಿಸುವ ಮೂಲಕ ಕೆರೆ ನೊರೆ ಕಡಿಮೆ ಮಾಡುವ ಪ್ರಸ್ತಾಪ ಜಲಮಂಡಳಿ ಮುಂದಿದೆ. ಆದರೆ ಇದು ಬೆಳ್ಳಂದೂರು ಕೆರೆಗೆ ಮಾತ್ರ ಸಮರ್ಪಕವಾಗಿದ್ದು, ವರ್ತೂರು ಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೊರೆ ಇರುವುದರಿಂದ ರಾಸಾಯನಿಕ ಸಿಂಪಡಿಸಲು ಸಾಧ್ಯವಿಲ್ಲ ಎಂದು ಸಂಘದ ಸದಸ್ಯರು ದೂರಿದರು.
ಹೊಸ ಕ್ರಮ ಕೈಗೊಳ್ಳಿ:ರಾಸಾಯನಿಕ ಸಿಂಪಡಿಸುವುದು ಕಷ್ಟವಾಗಿದ್ದು, ಈ ಬಗ್ಗೆ ಏನಾದರೂ ಪರ್ಯಾಯ ಕ್ರಮ ಕೈಗೊಳ್ಳಬೇಕು. ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆಯ ಪರಿಸ್ಥಿತಿ ಭಿನ್ನವಾಗಿರುವುದರಿಂದ ಹೊಸ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಮಂಡಳಿ ಅಧ್ಯಕ್ಷ ಅಂಜುಂ ಪರ್ವೇಜ್ ಅವರಿಗೆ ಸೂಚಿಸಿದರು.
ಇದಕ್ಕೂ ಮುನ್ನ ಕೈಗೊಂಡನಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಭೈರೇಗೌಡ,ದಿನೇಶ್ ಗುಂಡೂರಾವ್,ಬಿಬಿಎಂಪಿ ಆಡಳಿತಾಧಿಕಾರಿ ವಿಜಯಭಾಸ್ಕರ್, ಆಯುಕ್ತ ಕುಮಾರ್ ನಾಯಕ್ ಹಾಜರಿದ್ದರು.
ನಿರ್ವಸಿತರಿಗೆ ಉಚಿತ ಮನೆ
ಆಲೂರಿನಲ್ಲಿ ಬಿಡಿಎಗೆ ಸೇರಿದ 400 ಮನೆಗಳಿದ್ದು,ಕೆರೆ ಒತ್ತುವರಿ ತೆರವಿನಿಂದ ಮನೆ ಕಳೆದುಕೊಂಡ ಬಡವರಿಗೆ ಮನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡವರಿಗೆ ಉಚಿತವಾರಿ ಮನೆ ನೀಡಲಾಗುವುದು.ಶೀಘ್ರದಲ್ಲಿ ಈ ಪ್ರಕ್ರಿಯೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಘಟಕಕ್ಕೆ ಭೇಟಿ
ಬೆಳ್ಳಂದೂರು ಅಮಾನಿ ಖಾನೆಯಲ್ಲಿ 68 ಎಕರೆಯಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರು. 90 ಎಂಎಲ್ ಡಿ ಸಾಮರ್ಥ್ಯದ ಈ ಘಟಕ 2016 ಆಗಸ್ಟ್ ಗೆ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಇನ್ನು ಮುಂದೆ ವಸತಿ ಸಂಕೀರ್ಣಗಳಿಗೆ ಪರವಾನಗಿ ನೀಡುವ ಮುನ್ನ ಒಳಚರಂಡಿ ವ್ಯವಸ್ಥೆ ಹೊಂದುವುದನ್ನು ಕಡ್ಡಾಯ ಮಾಡಲಾಗಿದೆ. ಕೋಲಾರ, ಆನೇಕಲ್, ಹೊಸಕೋಟೆ ಕೆರೆಗಳಿಗೂ ಚರಂಡಿ ನೀರನ್ನು ಶುದ್ಧೀಕರಿಸಿ ಪೂರೈಸುವ ಯೋಜನೆಯೂ ಇದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಕಾಮಗಾರಿ ಪರಿಶೀಲನೆ
ರಾಜೀವ್ ಆವಾಸ್ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಆಡುಗೋಡಿಯ ಮಹಾಲಿಂಗೇಶ್ವರ ಬಡಾವಣೆಯಲ್ಲಿ ನಿರ್ಮಿಸಿಕೊಟ್ಟ ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲಿಸಿದರು. ಇಲ್ಲಿ 273 ಮನೆಗಳನ್ನು ನಿರ್ಮಿಸಿದ್ದು, ನಿರ್ಮಾಣಕ್ಕೆ 3 ಲಕ್ಷ ನೀಡಲಾಗಿದೆ. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಇಲ್ಲಿನ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದರು. ಈ ಭಾಗದಲ್ಲಿ ಮನೆ ಕಟ್ಟಿಕೊಳ್ಳಲಾಗದ ಬಡ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿಗಳನ್ನು ಕೊಳಚೆ ನಿರ್ಮೂಲನಾ ಮಂಡಳಿ ನೀಡಿತ್ತು. ಮೇ 30ರಂದು ಮತ್ತೊಮ್ಮೆ ನಗರದಲ್ಲಿ ನಡೆಯಲಿರುವ ಕಾಮಗಾರಿಗಳನ್ನು ಪರಿಶೀಲಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.