ಲುಧಿಯಾನ: ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಾಲಿಶವಾಗಿ ನಿರ್ವಹಿಸುತ್ತಿದ್ದಾರೆ ಎಂದು ಎಎಪಿ ಪಕ್ಷದ ಮಾಜಿ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
ದೆಹಲಿಗೆ ಸ್ವಾಯತ್ತ ರಾಜ್ಯದ ಬೇಡಿಕೆಯನ್ನು ಸಂಪೂರ್ಣ ಬೆಂಬಲಿಸಿರುವ ಯೋಗೇಂದ್ರ ಯಾದವ್ "ಹಿರಿಯ ಅಧಿಕಾರಿಗಳ ಕಛೇರಿಗಳಿಗೆ ಬೀಗ ಜಡಿಯುವ ಘಟನೆಗಳು ಸ್ವಾಯತ್ತತೆಯ ಬೇಡಿಕೆಗೆ ಹಿನ್ನಡೆಯಾಗಬಲ್ಲವು" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯಮಟ್ಟದ ಸ್ವರಾಜ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸದ್ಯಕ್ಕೆ ಇರುವ ಕಾನೂನಿನಲ್ಲಿ ಚುನಾಯಿತ ಸರ್ಕಾರಕ್ಕೆ ಅಧಿಕಾರಿಗಳನ್ನು ನೇಮಿಸುವ ಅಥವಾ ವರ್ಗಾಯಿಸುವ ಅಧಿಕಾರ ನೀಡುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.
"ಎಎಪಿ ಪಕ್ಷ ಏಕಪಕ್ಷೀಯ ಹಿಡಿತಕ್ಕೆ ಸಿಕ್ಕಿದೆ. ಮೋಸಹೋದ ಕಾರ್ಯಕರ್ತರಿಗೆ ಮರು ಚೇತನ ನೀಡಲು ದೇಶದ ಉದ್ದಗಲಗಳನ್ನು ನಾವು ಪ್ರವಾಸ ಮಾಡುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಅವರ ವಿದೇಶಿ ಪ್ರವಾಸಗಳ ಬಗ್ಗೆ ಮಾತನಾಡಿದ ಅವರು ಅಂತಹ ಪ್ರವಾಸಗಳು ಅಗತ್ಯ ಆದರೆ ಅವುಗಳು ಸಾರ್ವಜನಿಕ ಗಿಮಿಕ್ ಆಗಬಾರದು ಎಂದಿದ್ದಾರೆ.