ಪ್ರಧಾನ ಸುದ್ದಿ

ನೂತನ ರಕ್ಷಣಾ ಕಾರ್ಯದರ್ಶಿಯಾಗಿ ಜಿ ಮೋಹನ್ ಕುಮಾರ್ ಅಧಿಕಾರ ಸ್ವೀಕಾರ

Guruprasad Narayana

ನವದೆಹಲಿ: ನರೇಂದ್ರ ಮೋದಿ ಸರ್ಕಾರದಲ್ಲಿ ಭದ್ರತಾ ವಲಯದಲ್ಲಿ 'ಮೇಕ್ ಇನ್ ಇಂಡಿಯಾ' ಅಭಿಯಾನದ ರೂವಾರಿ ಜಿ ಮೋಹನ್ ಕುಮಾರ್ ಅವರು ನೂತನ ರಕ್ಷಣಾ ಕಾರ್ಯದರ್ಶಿಯಾಗಿ ನೆನ್ನೆ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಆರ್ ಕೆ ಮಾಥುರ್ ಅವರನ್ನು ಬದಲಿಸಿದ್ದಾರೆ.

ಒರಿಸ್ಸಾದ ೧೯೭೯ನೆ ಇಸವಿಯ ಐಎಎಸ್ ಬ್ಯಾಚ್ ಅಧಿಕಾರಿ ಕುಮಾರ್ ರಸಾಯನಶಾಸ್ತ್ರದಲ್ಲಿ ಪದವೀಧರ ಹಾಗೂ ಇಂಗ್ಲೆಂಡ್ ನಲ್ಲಿ ಎಂ ಬಿ ಎ ಕೂಡ ಅಧ್ಯಯನ ಮಾಡಿದ್ದಾರೆ. ಕಬ್ಬಿಣ, ನೀರು ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ, ರಫ್ತು ಅಭಿವೃದ್ಧಿ ಮುಂತಾದ ಇಲಾಖೆಗಳಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ.

ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವುದಕ್ಕು ಮೊದಲು ಸೆಪ್ಟಂಬರ್ ೧ ೨೦೧೪ರಿಂದ ಕೇರಳಿಗ ಕುಮಾರ್ ರಕ್ಷಣಾ ಉತ್ಪಾದನ ಇಲಾಖೆಯ ಕಾರ್ಯದರ್ಶಿಯಾಗಿದ್ದರು.

ರಕ್ಷಣಾ ವಲಯದಲ್ಲಿ 'ಮೇಕ್ ಇನ್ ಇಂಡಿಯಾ' ಅಭಿಯಾನದ ನೀತಿ ನಿಯಮಗಳನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಕುಮಾರ್.

ಇದು ಕುಮಾರ್ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ಬಂದಿದೆ. ಮೇ ೨೭ ಕ್ಕೆ ಕುಮಾರ್ ೬೦ನೆ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈಗ ನಿವೃತ್ತಿಗೆ ಬದಲು ಎರಡು ವರ್ಷ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರ ಭರವಸೆಯ ಅಧಿಕಾರಿ ಕುಮಾರ್ ಎನ್ನಲಾಗಿದೆ. ಈ ಮಧ್ಯೆ ಅಶೋಕ್ ಕುಮಾರ್ ಗುಪ್ತಾ ಅವರನ್ನು ಕುಮಾರ್ ಬದಲಾಗಿ ರಕ್ಷಣಾ ಉತ್ಪಾದನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

SCROLL FOR NEXT