ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಜೊತೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಭಾನುವಾರ ಮೂವರು ಗೆರಿಲ್ಲಾಗಳನ್ನು ಹತ್ಯೆಮಾಡಲಾಗಿದೆ.
"ತಂಗ್ಧಾರ ಪಟ್ಟಣದ ಗಡಿ ರೇಖೆಯ ಬಳಿ ಸೇನೆಯ ಜೊತೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಜಾರಿಯಲ್ಲಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೃಹತ್ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರ ಗುಂಪೊಂದು ಸೇನೆಯ ಮುಖ್ಯಕಛೇರಿಗೆ ನುಗ್ಗಲು ಮಾಡಿದ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ.
"ಭದ್ರತಾ ಪಡೆಗಳ ಹಾಗೂ ಗೆರಿಲ್ಲಾಗಳ ನಡುವಿನ ಈ ಕಾಳಗದಲ್ಲಿ ಎರಡು ಖಾಸಗಿ ಮನೆಗಳು ಧ್ವಂಸಗೊಂಡಿವೆ" ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಗಡಿಯಲ್ಲಿ ಕೆಲವು ಗೆರಿಲ್ಲಾಗಳು ಭಾರತಕ್ಕೆ ನುಸುಳಲು ಪ್ರಯತ್ನಿಸಿದ ವರದಿಗಳು ಕೂಡ ಲಭ್ಯವಿವೆ.