ಪಾಟ್ನಾ: ೧೩ ವರ್ಷಗಳ ಹಿಂದೆ ಪಾಟ್ನಾದಲ್ಲಿ ಮೂವರು ವಿದ್ಯಾರ್ಥಿಗಳನ್ನು ನಕಲಿ ಎನ್ ಕೌಂಟರ್ ನಲ್ಲಿ ಕೊಂದಿದ್ದ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಂಟು ಜನರನ್ನು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪಾಟ್ನಾ ಹೈಕೋರ್ಟ್ ಖುಲಾಸೆ ಮಾಡಿದೆ.
ಪೊಲೀಸರು ದಾಖಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಸಾಕ್ಷ್ಯಗಳ ಕೊರತೆ ಎಂದು ತಿಳಿಸಿ ಪಾಟ್ನಾ ಹೈಕೋರ್ಟಿನ ವಿಭಾಗೀಯ ಪೀಠ ಎಂಟು ಜನ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ ಎಂದು ವಕೀಲರು ಹೇಳಿದ್ದಾರೆ.
ಈ ಹಿಂದೆ ಈ ಎಂಟು ಜನರಿಗೆ ತ್ವರಿತ ನ್ಯಾಯಾಲಯ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಪೊಲೀಸ್ ಅಧಿಕಾರಿಯಾದ ಶಾಮ್ಸೆ ಆಲಂ ಅವರಿಗೆ ಗಲ್ಲು ಶಿಕ್ಷೆ ಹಾಗೂ ಕಾನ್ಸ್ಟೆಬಲ್ ಅರುಣ್ ಕುಮಾರ್ ಸಿಂಗ್ ಒಳಗೊಂಡಂತೆ ಇನ್ನಿತರ ಏಳು ಜನರಿಗೆ ಜೀವಾವಧಿ ಶಿಕ್ಷೆ ನೀಡಿತ್ತು.
ಪೊಲೀಸರ ಚಾರ್ಜ್ ಶೀಟ್ ಪ್ರಕಾರ ಫೋನ್ ಬಿಲ್ ವಿಷಯವಾಗಿ ಟೆಲಿಫೋನ್ ಭೂತಿನಲ್ಲಿ ಡಿಸೆಂಬರ್ ೨೮ ೨೦೦೨ ರಲ್ಲಿ ನಡೆದ ಗಲಾಟೆಯೊಂದರಲ್ಲಿ ಅಂಗಡಿ ಮಾಲೀಕ ಮತ್ತು ವಿದ್ಯಾರ್ಥಿಗಳಿಗೆ ಜಗಳವಾಗಿತ್ತು. ಆಗ ಅಂಗಡಿ ಮಾಲೀಕರು ವಿದ್ಯಾರ್ಥಿಗಳಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಈ ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಂದು ಇವರನ್ನು ದರೋಡೆಕೋರರು ಎಂದು ಕರೆದಿದ್ದರು.
ಪೊಲೀಸರಿಂದ ಸಿಐಡಿ ಗೆ ವಹಿಸಲಾಗಿದ್ದ ಈ ಪ್ರಕರಣ ಕೊನೆಗೆ ಸಿಬಿಐ ತನಿಖೆ ಮಾಡಿತ್ತು.