ಜೋಹಾನ್ಸ್ ಬರ್ಗ್: ಅಮಾನವೀಯ ಘಟನೆಯೊಂದರಲ್ಲಿ ಭಾರತ ಮೂಲದ ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ವಿಕಲಾಂಗ ಕ್ರಿಕೆಟಿಗನೊಬ್ಬನನ್ನು ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
23 ವರ್ಷದ ನವಾಜ್ ಖಾನ್ ಎಂಬ ಕ್ರಿಕೆಟ್ ಆಟಗಾರನನ್ನು, ಆತನ ಆತ್ಮೀಯ ಸ್ನೇಹಿತ ಥಂಡೊವಾಕೆ ಡುಮಾ ಮತ್ತು ಓರ್ವ ಮಂತ್ರವಾದಿ ಸಮೀಪದ ಕಾಡಿಗೆ ಕರೆ ದೊಯ್ದು ಚಾಕುವಿನಿಂದ ತಲೆಯನ್ನು ಕತ್ತರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನವಾಜ್ ಸ್ನೇಹಿತ ಡುಮಾ ಈ ಬಗ್ಗೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದು, ತನ್ನ ಸಮಸ್ಯೆಗೆ ಪರಿಹಾರ ಬಯಸಿ ಮಂತ್ರವಾದಿಯ ಬಳಿ ತೆರಳಿದಾಗ, ಮಂತ್ರವಾದಿ ಮನುಷ್ಯನೊಬ್ಬನ ತಲೆಯನ್ನು ತೆಗೆದುಕೊಂಡು ಬಾ ಎಂದು ತಿಳಿಸಿದ್ದಾಗಿ ವಿವರಿಸಿದ್ದಾನೆ. ಇನ್ನು ನವಾಜ್‍ನ ಮೊಬೈಲ್ ಅನ್ನು ಹೊಂದಿದ್ದ ಇತರೆ ಇಬ್ಬರನ್ನು ಅನುಮಾನಿಸಿ ಪೊಲೀಸರು ಬಂಧಿಸಿದ್ದಾರೆ.
ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‍ಮನ್ ಆಗಿದ್ದ ನವಾಜ್ ಖಾನ್, 2013ರಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾದ ವರ್ಷದ ಅತ್ಯುತ್ತಮ ವಿಕಲಾಂಗ ಕ್ರಿಕೆಟ್ ಆಟಗಾರ ಎಂಬ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ತನ್ನ ನೆಚ್ಚಿನ ಆಟಗಾರ ಹಾಶೀಂ ಆಮ್ಲಾ ಅವರಿಂದ ಪ್ರಶಸ್ತಿಯನ್ನು ಪಡೆದ ನಂತರ ಅದು ಆತನ ಜೀವನದ ಶ್ರೇಷ್ಠ ದಿನವೆಂದು ಸಂತೋಷಪಟ್ಟಿದ್ದಾಗಿ ನವಾಜ್ ತಾಯಿ ಜಾಕಿಯಾ ಖಾನ್ ತಿಳಿಸಿದ್ದಾರೆ. ನವಾಜ್ ಅತ್ಯಂತ ಶಿಸ್ತಿನ ಆಟಗಾರನಾಗಿದ್ದು, ಅತ್ಯುತ್ತಮ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‍ಮನ್ ಆಗಿದ್ದ. ಇತರೆ ವಿಕಲಾಂಗ ಆಟಗಾರರಿಗೆ ಸ್ಪೂರ್ತಿಯಾಗಿದ್ದ. ಆತ ಮುಂದಿನ ದಿನಗಳಲ್ಲಿ ತಮ್ಮ ರಾಷ್ಟ್ರೀಯ ತಂಡದೊಂದಿಗೆ ವಿದೇಶಿ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದ್ದ ಎಂದು ತಂಡದ ವ್ಯವಸ್ಥಾಪಕ ವಿನ್ಸ್‍ಟನ್ ಸ್ಟಬ್ಸ್ ತಿಳಿಸಿದ್ದಾರೆ.