ಲಂಡನ್ ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ನೀರಜ್ ಪಾಟೀಲ್ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಮೂರು ಬಾರಿ ಕರೆದರೂ ಬರಲಿಲ್ಲ ಸಿಎಂ: ನೀರಜ್ ಪಾಟೀಲ್

ನಿಜ, ಎರಡು ವರ್ಷ ತಡವಾಗಿ ಬಸವಣ್ಣನವರ ಪುತ್ಥಳಿ ಅನಾವರಣಗೊಂಡಿದೆ. ಆದರೆ, ಇದೇ ಸಮಯದಲ್ಲಿ ಅಂಗೀಕಾರ ಪಡೆದಿದ್ದ ಬೆಂಗಳೂರಿನಲ್ಲಿ ಭುವನೇಶ್ವರಿ ವಿಗ್ರಹ ಸ್ಥಾಪಿಸುವ ಕೆಲಸ ಏನಾಯ್ತು?..

ಬೆಂಗಳೂರು: `ನಿಜ, ಎರಡು ವರ್ಷ ತಡವಾಗಿ ಬಸವಣ್ಣನವರ ಪುತ್ಥಳಿ ಅನಾವರಣಗೊಂಡಿದೆ. ಆದರೆ, ಇದೇ ಸಮಯದಲ್ಲಿ ಅಂಗೀಕಾರ ಪಡೆದಿದ್ದ ಬೆಂಗಳೂರಿನಲ್ಲಿ ಭುವನೇಶ್ವರಿ ವಿಗ್ರಹ ಸ್ಥಾಪಿಸುವ ಕೆಲಸ ಏನಾಯ್ತು? ಅದನ್ಯಾವಾಗ ಸ್ಥಾಪಿಸುತ್ತೀರಿ? ಯೋಜನೆ ಏನಾದರೂ ರದ್ದಾಗಿದೆಯೆ?' ಎಂದು ಲಂಡನ್‍ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಲಂಡನ್ ಸಂಸತ್ ಆವರಣದಲ್ಲಿ (ಥೇಮ್ಸ್ನದಿ ದಂಡೆ) ಇತ್ತೀಚೆಗೆ ಅನಾವರಣಗೊಂಡಿರುವ ಬಸವಣ್ಣನವರ ಪುತ್ಥಳಿಗೆ ರಾಜ್ಯ ಸರ್ಕಾರದಿಂದ ರು.3 ಕೋಟಿ ಅನುದಾನ ಪಡೆದಿದ್ದರೂ ಸರ್ಕಾರದ ಒಬ್ಬ ಪ್ರತಿನಿಧಿಯೂ ಪಾಲ್ಗೊಂಡಿರದ, ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿರುವ ಕುರಿತು ಮಾಧ್ಯಮಗಳು ಪ್ರಕಟಿಸಿದ್ದ ವರದಿಗೆ ಉತ್ತರವಾಗಿ ಈ ಪ್ರಶ್ನೆ ಎತ್ತಿದ್ದಾರೆ ಡಾ. ನೀರಜ್ ಪಾಟೀಲ್. ವರದಿಗೆ ಸ್ಪಷ್ಟನೆ ನೀಡಿರುವ ಅವರು, ಬಸವಣ್ಣನವರ ಪುತ್ಥಳಿ ಬ್ರಿಟಿಷ್ ಸಂಸತ್ ಮುಂದೆ ಸ್ಥಾಪನೆಯಾಗಿದ್ದೇ ದೊಡ್ಡ ಸಾಧನೆ.

ಅದು ಎರಡು ವರ್ಷ ತಡವಾಗಿದ್ದರೆ ಏನಾಯ್ತು ಎಂಬರ್ಥದಲ್ಲಿ ಸರ್ಕಾರವನ್ನೇ ಪ್ರಶ್ನಿಸಿದ್ದಾರೆ. `ಮೂರು ಸಲ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಆಹ್ವಾನಿಸಿದ್ದೆ. ಆ. 21ರಂದು ಭೇಟಿಯಾದಾಗ ಸಚಿವರಾದ ಎಚ್.ಸಿ. ಮಹದೇವಪ್ಪ, ರೋಷನ್ ಬೇಗ್ ಮತ್ತು ವಿನಯ ಕುಲಕರ್ಣಿ ಕೂಡಾ ಇದ್ದರು. ಸಿಎಂ ನನ್ನ ಆಹ್ವಾನವನ್ನು ಮನ್ನಿಸಿ ವಿಶೇಷ ಅತಿಥಿಯಾಗಿ ಆಗಮಿಸಬೇಕಿತ್ತು. ಇಲ್ಲವೇ ಸರ್ಕಾರದ ಪರವಾಗಿ ಪ್ರತಿನಿಧಿಯೊಬ್ಬರನ್ನು ಕಳಿಸಬಹುದಿತ್ತು. ಆದರೆ, ಅವರು ಎರಡನ್ನೂ ಮಾಡದಿರುವುದು ದುರದೃಷ್ಟಕರ' ಎಂದಿದ್ದಾರೆ.

ಪುತ್ಥಳಿ ಎಂದರೆ ಪುತ್ಥಳಿಯಷ್ಟೇ ಅಲ್ಲ: ಪುತ್ಥಳಿ ಎಂಬುದಕ್ಕೆ ಡಾ. ನೀರಜ್ ಪಾಟೀಲ್ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾರೆ. ಪುತ್ಥಳಿಯನ್ನು ಹೊರಾಂಗಣದಲ್ಲಿ ಸ್ಥಾಪಿಸಲಾಗಿದೆ. ಹೀಗಾಗಿ ಅದನ್ನು ನೆಲದ ಮೇಲೆ ಸ್ಥಾಪಿಸಬೇಕಾಗುತ್ತದೆ. ಹೀಗಾಗಿ, ಪುತ್ಥಳಿ ಎಂದರೆ ಅದನ್ನು ಸ್ಥಾಪಿಸಿದ ನೆಲ ಹಾಗೂ ಪೀಠವೂ ಅದರಲ್ಲಿ ಸೇರುತ್ತದೆ ಎಂದಿದ್ದಾರೆ. ವರದಿಯಲ್ಲಿ ಎತ್ತಿರುವ ಹಲವಾರು ಪ್ರಶ್ನೆಗಳಿಗೆ ಇವರ ಸ್ಪಷ್ಟನೆಯಲ್ಲಿ ಉತ್ತರಗಳಿಲ್ಲ. ಪುಟ್ಟ ಪ್ರತಿಮೆ ನಿರ್ಮಿಸಲು ಅಷ್ಟೊಂದು ಸಮಯ ಮತ್ತು ಹಣ ಬೇಕಾಯಿತು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಪುತ್ಥಳಿಯನ್ನು 2013ರ ಬಸವ ಜಯಂತಿಯಂದೇ ಅನಾವರಣಗೊಳಿಸಬೇಕೆಂಬ ರಾಜ್ಯ ಸರ್ಕಾರದ ಆದೇಶ ಉಲ್ಲಂಘನೆಯಾಗಿರುವ ಕುರಿತು ಚಕಾರವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಬಸವ ಜಯಂತಿಯಂದು ನಡೆಯಬೇಕಿದ್ದ ಅನಾವರಣ ನವೆಂಬರ್‍ನಲ್ಲಿ ನಡೆಯಿತೇಕೆ ಎಂಬ ಪ್ರಶ್ನೆಗೂ ಉತ್ತರಿಸಿಲ್ಲ.

ಹುಡುಕುತ್ತ ಹೋದರೆ ಇಂಥ ಹಲವಾರು ಪ್ರಶ್ನೆಗಳು ಏಳುತ್ತವೆ. ದಿ ಬಸವೇಶ್ವರ ಫೌಂಡೇಶನ್ ಎಂಬುದು ಏಕವ್ಯಕ್ತಿ ಪ್ರತಿಷ್ಠಾನ. ಅಂದರೆ, ಡಾ. ನೀರಜ್ ಪಾಟೀಲ್ ಬಿಟ್ಟರೆ ಈ ಪ್ರತಿಷ್ಠಾನದಲ್ಲಿ ಇತರ ವ್ಯಕ್ತಿಗಳಿಲ್ಲ. ಅವರೇ ಹೇಳುವಂತೆ ಬಸವಣ್ಣನವರ ಪುತ್ಥಳಿ ಸ್ಥಾಪನೆ ಅಷ್ಟೊಂದು ಮಹತ್ವದ್ದಾಗಿದ್ದರೆ, ಇಂಥ ಚಟುವಟಿಕೆಗೆ ಸಂಬಂಧಿಸಿದ ಅಥವಾ ಆಸಕ್ತ ಅರ್ಹರನ್ನು ತಮ್ಮ ಪ್ರತಿಷ್ಠಾನದಲ್ಲಿ ಏಕೆ ಸೇರಿಸಿಕೊಳ್ಳಲಿಲ್ಲ? ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಪುತ್ಥಳಿ ನಿರ್ಮಾಣ ಹೊರತಾಗಿ ಇತರ ಕೆಲಸಗಳಿಗೆ ಅನುದಾನ ಏಕೆ ಬಳಸಿಕೊಂಡರು? ಪುತ್ಥಳಿಯ ವಿವರಗಳನ್ನೇಕೆ ಮುಂಚೆಯೇ ಸರ್ಕಾರದೊಂದಿಗೆ ಹಂಚಿಕೊಳ್ಳಲಿಲ್ಲ. ಸದರಿ ಮೂರ್ತಿಯನ್ನು ರಚಿಸಿದ ಶಿಲ್ಪಿಯೇ ರಾಜ್ಯ ಹಾಗೂ ರಾಷ್ಟ್ರದ ಇತರೆಡೆ ಬಸವಣ್ಣನವರ ಭಾರಿ ಗಾತ್ರದ ಮೂರ್ತಿಗಳನ್ನು ಲಂಡನ್ ಮೂರ್ತಿಗಿಂತ ಸಾಕಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

ಹೀಗಿರುವಾಗ, ಪುಟ್ಟ ಪುತ್ಥಳಿ ಹಾಗೂ ಪೀಠ ರಚನೆಗೆ ರು.3 ಕೋಟಿ ವೆಚ್ಚವಾಯಿತೆ? ತಮ್ಮ ಸ್ಪಷ್ಟನೆಯಲ್ಲಿ ನಮೂದಿಸಿರುವ ವೆಚ್ಚದ ಅಂಶಗಳ್ಯಾವನ್ನೂ ರಾಜ್ಯ ಸರ್ಕಾರ ಅನುಮೋದಿಸಿರಲಿಲ್ಲ ಎಂಬುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ರಾಜ್ಯ ಸರ್ಕಾರದಿಂದ ರು.3 ಕೋಟಿ ಅನುದಾನ ಪಡೆದಿದ್ದರೂ ಪುತ್ಥಳಿಯಲ್ಲಿ ಈ ಮಾಹಿತಿಯನ್ನು ನಮೂದಿಸಿಲ್ಲ. ಈ ಪುತ್ಥಳಿಗೆ ಕರ್ನಾಟಕ ಸರ್ಕಾರ ಅನುದಾನ ನೀಡಿದೆ ಎಂಬುದನ್ನು ಹೇಳುವ ಸೌಜನ್ಯವನ್ನೂ ತೋರಿಲ್ಲದಿರುವುದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT