ಪ್ರಧಾನ ಸುದ್ದಿ

ಹುಳುಕು ಮುಚ್ಚಿಕೊಳ್ಳುವ ಉದ್ದೇಶದಿಂದ ನ್ಯಾ. ಸುಭಾಷ್ ಅಡಿ ಪದಚ್ಯುತಿ ತಂತ್ರ

Mainashree
ಬೆಂಗಳೂರು: ತಮ್ಮ ಹುಳುಕು ಮುಚ್ಚಿಕೊಳ್ಳುವುದಕ್ಕಾಗಿ ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ.ಅಡಿ ಅವರ ಪದಚ್ಯುತಿಗೆ ನೀಲನಕ್ಷೆ ತಯಾರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಲೋಕಾಯುಕ್ತ ಸಂಸ್ಥೆಯನ್ನೇ ಅನಾಥಗೊಳಿಸುವುದಕ್ಕೆ ಮುಂದಾಗಿದೆ.
ಲೋಕಾಯುಕ್ತರನ್ನು ಪದಚ್ಯುತಿ ಗೊಳಿಸ ಬೇಕೆಂಬ ಆಗ್ರಹ ಮಾತ್ರ ಇದುವರೆಗೆ ಪ್ರಬಲವಾಗಿ ಮೊಳಗುತ್ತಿತ್ತು. ಉಪಲೋಕಾಯುಕ್ತ ಸುಭಾಷ್ ಬಿ.ಅಡಿ ಅವರ ವಿರುದ್ಧದ ಭ್ರಷ್ಟಾಚಾರ ಆರೋಪ ವಾಗಲಿ, ಪದಚ್ಯುತಿ ಪ್ರಸ್ತಾಪವಾಗಲಿ ಸಾರ್ವಜನಿಕರ ಅವಗಾಹನೆಯಲ್ಲೇ ಇಲ್ಲ. ಆದರೆ ಅಡಿ ಅವರು ಲೋಕಾ ಮುಖ್ಯಸ್ಥರಾದರೆ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಕ್ಕೆ ಸಂಚಕಾರ ಉಂಟು ಮಾಡಬಹುದು ಎಂದು ಹೀಗೆ ಮಾಡಲಾಗಿದೆ ಎನ್ನಲಾಗಿದೆ. 
ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ಕಳಂಕ ರಹಿತವಾಗಿದ್ದರೆ ಸಿಎಂ ಏಕೆ ಹೆದರಿಕೊಳ್ಳಬೇಕು? ಲೋಕಾ ಬಚಾವ್ ಮಾಡುವುದಕ್ಕೆ ಈ ಕ್ರಮಕ್ಕೆ ಮುಂದಾಗಿದ್ದಾರೆಯೋ? ಅಥವಾ ತಮ್ಮ ಕಳಂಕ ಮುಚ್ಚಿಕೊಳ್ಳುವುದಕ್ಕೆ ಯಜಮಾನನಿಲ್ಲದ ಸಂಸ್ಥೆಯನ್ನಾಗಿ ಮಾಡಲು ಮುಂದಾಗಿದ್ದಾರೆಯೋ? ಎಂಬ ಕಠೋರ ಪ್ರಶ್ನೆಗೆ ಸಿದ್ದರಾಮಯ್ಯನವರೇ ಉತ್ತರ ಕೊಡಬೇಕಿದೆ. 
ಪದಚ್ಯುತಿ ಹಿಂದೆ ಅಧಿಕಾರಿಗಳ ಲಾಬಿ? ಇದೆಲ್ಲದರ ಜತೆಗೆ ಉಪಲೋಕಾಯುಕ್ತ ಸುಭಾಷ್ ಅಡಿ ಪದಚ್ಯುತಿ ವಿಚಾರದಲ್ಲಿ ಅಧಿಕಾರಿಗಳ ಲಾಬಿ ಪ್ರಬಲವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸುಭಾಷ್ ಅಡಿ ಅವರು ಉಪಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿ 400ಕ್ಕೂ ಹೆಚ್ಚು ವರದಿ ಕಳುಹಿಸಿದ್ದಾರೆ. 
ಆದರೆ ಸರ್ಕಾರ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿಲ್ಲ. ಅಡಿ ಅವರಿಂದ ಸಂತ್ರಸ್ತರಾಗಿರುವ ಅಧಿಕಾರಿ ವರ್ಗ ಎಸ್‍ಪಿಜಿ ಮೇಲೆ ಪ್ರಭಾವ ಬೀರಿ ಈ ಪ್ರಸ್ತಾಪವನ್ನು ತೇಲಿ ಬಿಟ್ಟಿದೆ ಎನ್ನಲಾಗುತ್ತಿದೆ. ಜತೆಗೆ ಉಪಲೋಕಾಯುಕ್ತ ಹುದ್ದೆಗೆ ಕೆ.ಎಲ್.ಮಂಜುನಾಥ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿದ್ದರೆ, ಪ್ರತಿಪಕ್ಷ ಹಾಗೂ ರಾಜ್ಯಪಾಲರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ರೊಚ್ಚಿಗೆ ಎದ್ದಿರುವ ಸರ್ಕಾರ ಜಗದೀಶ್ ಶೆಟ್ಟರ್ ಅವರಿಗೆ ಮುಜುಗರವನ್ನುಂಟು ಮಾಡಲೂ ಈ ಮೂಲಕ ಯತ್ನಿಸಿದೆ.
SCROLL FOR NEXT