ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಭ್ರಷ್ಟಾಚಾರದ ಸುತ್ತ ಗಿರಿಕಿ ಹೊಡೆದು ವ್ಯರ್ಥವಾದರೆ, ಗುರುವಾರದಿಂದ ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಅಸಹಿಷ್ಣುತೆಯತ್ತಲೇ ಗಿರಕಿಹೊಡೆಯುವ ನಿರೀಕ್ಷೆ ಇದೆ.
ಪ್ರತಿಪಕ್ಷಗಳ ಅಸಹಿಷ್ಣುತೆ ವಿಷಯ ಪ್ರಸ್ತಾಪಕ್ಕೆ ಪ್ರತಿಯಾಗಿ, ಕರ್ನಾಟಕದಲ್ಲಿ ಹಿಂಸಾಚಾರಕ್ಕೆ ಕಾರಣವಾದ ಟಿಪ್ಪುಸುಲ್ತಾನ ಜನ್ಮದಿನಾಚರಣೆಯನ್ನು ಪ್ರಸ್ತಾಪಿಸಲು ಆಡಳಿತ ಪಕ್ಷ ಸಿದ್ಧತೆ ನಡೆಸಿದೆ. ಈಗಾಗಲೇ ಪ್ರತಿಪಕ್ಷಗಳು ಅಸಹಿಷ್ಣುತೆ ಕುರಿತ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿ ಉಭಯ ಸದನಗಳ ಸಭಾಧ್ಯಕ್ಷರಿಗೆ ನೋಟಿಸ್ ನೀಡಿವೆ.
ಬಿಹಾರ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ರಾಷ್ಟ್ರಾದ್ಯಂತ ಎದ್ದಿರುವ ಅಸಹಿಷ್ಣುತೆ, ತತ್ಪರಿಣಾಮ ರೂಪುಗೊಂಡ ಪ್ರಶಸ್ತಿ ವಾಪ್ಸಿ ಚಳವಳಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಿಸುತ್ತಿದೆ. ಅದೇ ಪ್ರತಿಪಕ್ಷಗಳು ಬಿಹಾರ ಗೆಲುವಿನ ಆತ್ಮವಿಶ್ವಾಸದಿಂದ ಬೀಗುತ್ತಿವೆ.
ಬಿಜೆಪಿಗೆ ಅನಿವಾರ್ಯ: ಆಡಳಿತಾರೂಢ ಬಿಜೆಪಿಗೆ ಕೂಡಾ ಜಿಎಸ್‍ಟಿ ಜಾರಿ ಮಾಡುವುದು ಅನಿವಾರ್ಯ. ಆ ಪಕ್ಷ ಚುನಾವಣೆಗೆ ಮುನ್ನ ಘೋಷಿಸಿರುವ ಆರ್ಥಿಕ ಸುಧಾರಣೆಗಳ ಜಾರಿಗೆ ಜಿಎಸ್‍ಟಿ ನಿರ್ಣಾಯಕ. ಹೀಗಾಗಿ ಬಿಜೆಪಿ ಜಿಎಸ್‍ಟಿ ಬಗ್ಗೆ ಕಾಂಗ್ರೆಸ್ ಎತ್ತಿರುವ ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸಲಿದೆ.
ಈ ವಿಷಯದಲ್ಲಿ ಪ್ರತಿಷ್ಠೆ ಮತ್ತು ಪಟ್ಟು ಎರಡನ್ನೂ ಬಿಟ್ಟು ಮುಂದಡಿ ಇಡಲಿದೆ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕ, ವಿತ್ತ ಸಚಿವ ಅರುಣ್ ಜೆಟ್ಲಿ, ಲೋಕಸಭೆಯಲ್ಲಿ ಆಡಳಿತ ಪಕ್ಷದ ನಾಯಕ ವೆಂಕಯ್ಯನಾಯ್ಡು , ಜಿಎಸ್‍ಟಿ ಜಾರಿಗಾಗಿ ನಾವು ನಾಲ್ಕು ಹೆಜ್ಜೆ ಮುಂದಿಟ್ಟು ಎಲ್ಲರ ಸಹಕಾರ ಕೋರುತ್ತೇವೆ ಎಂದು ಹೇಳಿದ್ದಾರೆ. ಎನ್‍ಡಿಎ ಪ್ರತಿತಂತ್ರ ಕಾಂಗ್ರೆಸ್ ಅಸಹಿಷ್ಣುತೆ ಕುರಿತಂತೆ ಚರ್ಚೆಗೆ ಪಟ್ಟು ಹಿಡಿದರೆ, ರಾಹುಲ್ ಬ್ರಿಟಿಷ್ ಪೌರತ್ವವನ್ನು ಪ್ರತಿದಾಳವಾಗಿ ಬಳಸುವುದು ಎನ್‍ಡಿಎ ಪ್ರತಿತಂತ್ರ.
ಸಚಿವರ ಸಭೆ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆ ಸೇರಿದಂತೆ ವಿವಿಧ ಮಸೂದೆಗಳಿಗೆ ಸಂಸತ್ತಿನ ಅಂಗೀಕಾರ ಪಡೆಯುವ ತಂತ್ರಗಾರಿಕೆ ಕುರಿತು ಹಿರಿಯ ಸಚಿವರು ಸಭೆ ಸೇರಿ ಚರ್ಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics