ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮಕ್ಕಳ ಸುರಕ್ಷ ನೀತಿ ಮಿಲಿಟರಿ, ಕೇಂದ್ರೀಯ ಹಾಗೂ ಖಾಸಗಿ ಸೇರಿದಂತೆ ಎಲ್ಲ ಶಾಲೆಗಳಿಗೂ ಅನ್ವಯವಾಗಬೇಕು. ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಆಗಲಿ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೊಠಡಿಗಳೇ ಇಲ್ಲದ ಕಾರಣ ವಿದ್ಯಾರ್ಥಿನಿಯರಿಗೆ ಮರದ ಕೆಳಗೆ ಪಾಠ ಮಾಡಲಾಗುತ್ತಿದೆ...
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶುಕ್ರವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ `ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಸುರಕ್ಷತಾ ನೀತಿ' ಕರಡು ಕುರಿತು ಅಭಿಪ್ರಾಯ ಸಂಗ್ರಹ ಕಾರ್ಯ ಕ್ರಮದಲ್ಲಿ ಕೇಳಿಬಂದ ಕೆಲ ಅಭಿಪ್ರಾಯಗಳಿವು. ಕಾರ್ಯಕ್ರಮದಲ್ಲಿ ನೆರೆದಿದ್ದ ಪೋಷಕರು, ವಿವಿಧ ಸಂಘಟನೆ ಮುಖಂಡರು, ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಸರ್ಕಾರ ರಚಿಸಿರುವ ಕರಡು ಬಗ್ಗೆ ತಮ್ಮ ಸಲಹೆ ನೀಡಿದರು.
ಚೈಲ್ಡ್ ರೈಟ್ ಟ್ರಸ್ಟ್‍ನ ಸದಸ್ಯ ವಾಸುದೇವ ಶರ್ಮಾ ಮಾತನಾಡಿ, ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ `ಮಕ್ಕಳ ಸುರಕ್ಷತಾ ನೀತಿ' ಜಾರಿಗೆ ತರಲು ಮುಂದಾಗಿರುವುದು ಉತ್ತಮ. ಈ ಸುರಕ್ಷತಾ ನೀತಿ ಎಲ್ಲ ಶಾಲೆಗಳಿಗೂ ಅನ್ವಯ ಆಗುವಂತಿರಬೇಕು. ಸಾಕಷ್ಟು ಶಾಲೆಗಳಲ್ಲಿ ಪೋಷಕರನ್ನೇ ಒಳಗೆ ಸೇರಿಸುವುದಿಲ್ಲ. ಹೀಗಾದರೆ ಮಕ್ಕಳ ಸ್ಥಿತಿ ತಿಳಿಯುವುದು ಹೇಗೆ?
ಇನ್ನು ಕೇಂದ್ರೀಯ ಹಾಗೂ ಮಿಲಿಟರಿ ಶಾಲೆಗಳಲ್ಲಿ ಓದುವ ಮಕ್ಕಳದ್ದೂ ಇದೇ ಕಥೆ. ಹೀಗಾಗಿ ರಾಜ್ಯದಲ್ಲಿರುವ ಎಲ್ಲ ಶಾಲೆಗಳಿಗೂ ಈ ನೀತಿ ಅನ್ವಯ ಆಗಬೇಕು ಎಂದು ಆಗ್ರಹಿಸಿದರು.
ಮಾಗಡಿ ಶಾಲೆಯ ಸರ್ಕಾರಿ ಶಿಕ್ಷಕಿ ಶೈಲಜ ಮಾತನಾಡಿ, ಸರ್ಕಾರ ನೆಪಮಾತ್ರಕ್ಕೆ ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಸ್ಯಾನಿಟರಿ ಪ್ಯಾಡ್ ಗುಣಮಟ್ಟ ಕಳಪೆ ಆಗಿವೆ. ಇದರಿಂದ ವಿದ್ಯಾರ್ಥಿನಿಯರ ಆರೋಗ್ಯವೂ ಹಾಳು. ಹೀಗಾಗಿ ಸರ್ಕಾರ ಕೂಡಲೇ ಅವುಗಳನ್ನು ನಿಲ್ಲಿಸಬೇಕು. ಇಲ್ಲವೇ ಉತ್ತಮ ಗುಣಮಟ್ಟದ ಪ್ಯಾಡ್ ನೀಡಬೇಕು ಎಂದರು. ಶಾಲೆಗಳಿಗೆ ಭದ್ರತಾ ಸಿಬ್ಬಂದಿ ನೇಮಿಸಬೇಕು. ಇಂತಹ ನೀತಿಗಳ ಪ್ರತಿಯನ್ನು ಶಾಲಾ ಸೂಚನಾ ಪಾಲಕದಲ್ಲಿ ಹಾಕಬೇಕು. ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಕೊಠಡಿ ನೀಡಬೇಕು. ಲೈಂಗಿಕ ಶಿಕ್ಷಣ ಅಳವಡಿಸಬೇಕು ಎಂಬುದು ಸೇರಿದಂತೆ ಅಲ್ಲಿ ನೆರೆದಿದ್ದವರು ಸಾಕಷ್ಟು ಸಲಹೆ ನೀಡಿದರು. ಸಲಹೆಯನ್ನು ಸಂಗ್ರಹಿಸಿ ಚರ್ಚಿಸಿ ನಂತರ ಕರಡು ಅಂತಿಮಗೊಳಿಸಲಾಗುವುದು ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics