ಪ್ರಧಾನ ಸುದ್ದಿ

ನಯನತಾರಾ ನಂತರ ಅಕಾಡೆಮಿ ಪ್ರಶಸ್ತಿ ವಾಪಸ್ ಮಾಡಿದ ಕವಿ ಅಶೋಕ್ ವಾಜಪೇಯಿ

Guruprasad Narayana

ನವದೆಹಲಿ: ದೇಶದಲ್ಲಿ ಕೋಮು ದಳ್ಳುರಿಯನ್ನು ತಡೆಯಲು, ಚಿಂತಕರ, ವಿಚಾರವಾದಿಗಳ ಕೊಲೆಗಳನ್ನು ತಡೆಯಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ವಿರೋಧಿಸಿ ಹಿರಿಯ ಬರಹಗಾರರಾದ ಉದಯ್ ಪ್ರಕಾಶ್ ಮತ್ತು ಜವಹಾರ್ ಲಾಲ್ ನೆಹರು ಅವರ ಸೋದರ ಸೊಸೆ ನಯನತಾರ ಸೈಗಲ್ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಬೆನ್ನಲ್ಲೇ ಈಗ ಪ್ರಖ್ಯಾತ ಕವಿ ಅಶೋಕ್ ವಾಜಪೇಯಿ ಅವರು ಕೂಡ ಪ್ರಶಸ್ತಿ ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.

ಬರಹಗಾರರು ತಮ್ಮ ನಿಲುವನ್ನು ತೋರಿಸುವುದಕ್ಕೆ ಇದು ಸೂಕ್ತ ಸಮಯ ಎಂದು ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ವಾಜಪೇಯಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೂ ವಾಗ್ದಾಳಿ ನಡೆಸಿರುವ ವಾಜಪೇಯಿ ಅವರು, ಪ್ರಧಾನಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ ಆದರೆ ಒಬ್ಬ ಬರಹಗಾರನನ್ನು ಕೊಲೆ ಮಾಡಿದಾಗ, ಒಬ್ಬ ಸಾಮಾನ್ಯನನ್ನು ಕೋಮು ದ್ವೇಷಕ್ಕಾಗಿ ಕೊಂದಾಗ, ಅವರ ಸಚಿವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವಾಗ ಅವರು ಬಾಯಿಮುಚ್ಚಿಕೊಂಡಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಕೂಡ ಹಿರಿಯ ಕವಿ ಚಂದ್ರಶೇಖರ ಪಾಟೀಲ್ ಅವರು ಪ್ರತಿಷ್ಟಿತ ಪಂಪ ಪ್ರಶಸ್ತಿಯನ್ನು ಹಿಂದಿರುಗಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

SCROLL FOR NEXT