ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ, ಬರದ ಹಿನ್ನೆಲೆಯಲ್ಲಿ ಸಮಸ್ಯೆ ಆಲಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ರಾಜ್ಯಕ್ಕಾಗಮಿಸುತ್ತಿದ್ದಾರೆ. ಸಂಪುಟ ವಿಸ್ತರಣೆಯಾಗಿಲ್ಲ, ಸರ್ಕಾರ ತಮ್ಮ ಅಹವಾಲು ಕೇಳುತ್ತಿಲ್ಲ ಎಂದು ಸ್ವತಃ ಕೆಪಿಸಿಸಿ ಕಾರ್ಯಕರ್ತರೇ ದೂರು ಹಿಡಿದುಕೊಂಡು ಕುಳಿತಿದ್ದಾರೆ. ಇದರ ಜತೆಯಲ್ಲೇ ಪ್ರತಿಪಕ್ಷಗಳು ಕೂಡ, ಸಿದ್ದರಾಮಯ್ಯ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ, ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ಸೋತಿದೆ ಎಂಬ ರಾಶಿ ಟೀಕೆಗಳನ್ನು ಮುಂದೆ ಮಾಡಿ ನಿಂತಿವೆ. ಇದರ ನಡುವೆಯೇ `ಕನ್ನಡಪ್ರಭ' ಕೂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಳಬೇಕಾದ ಪ್ರಶ್ನೆಗಳನ್ನು ಪಟ್ಟಿ ಮಾಡಿದೆ.
1.ರೈತರ ಆತ್ಮಹತ್ಯೆ ತಡೆಗೆ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳೇನು? ಬಡ್ಡಿ ಮನ್ನಾ ಲಾಭ ಪಡೆಯುವರ ಸಂಖ್ಯೆ ಕಡಿಮೆ. ಅದಕ್ಕಾಗಿ ಇತರೆ ಉಪಕ್ರಮಗಳೇನು?
2. ಕಂದಾಯ ಸಚಿವರ ಆದಿಯಾಗಿ ಹಿರಿಯ ಸಚಿವರು ತಂಡಗಳಲ್ಲಿ ಪ್ರವಾಸ ಮಾಡಿ ವಾಸ್ತವ ವರದಿ ಸಿದ್ಧಗೊಳಿಸಿ ಪರಿಹಾರ ಕಾರ್ಯಕ್ರಮ ರೂಪಿಸಬೇಕಿತ್ತಲ್ಲವೇ?
3. ಜಿಲ್ಲಾ ಸಚಿವರು ಮತ್ತು ಕಾರ್ಯದರ್ಶಿಗಳು ನಿಯಮಿತವಾಗಿ ಜಿಲ್ಲಾ ಪ್ರವಾಸ ಮಾಡಿ ವರದಿ ನೀಡಬೇಕೆಂಬ ಸಿಎಂ ಸೂಚನೆ ಪಾಲಿಸದಿದ್ದರೂ ಕ್ರಮ ಕೈಗೊಳ್ಳಲಿಲ್ಲ ಏಕೆ?
4.ಸರ್ಕಾರ ಮತ್ತು ಪಕ್ಷದ ಸಮನ್ವಯಕ್ಕೆ ರಚನೆಯಾದ ಸಮನ್ವಯ ಸಮಿತಿ ಕಾಗದದ ಮೇಲೆ ಉಳಿದಿದ್ದೇಕೆ?
5.ಸರ್ಕಾರ/ಸಚಿವರ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದರೂ ಸಂಘಟಿತವಾಗಿ ತಿರುಗೇಟು ನೀಡುತ್ತಿಲ್ಲ ಏಕೆ? ಸಂಪುಟದಲ್ಲಿ ಸಮನ್ವಯ ಕೊರತೆಗೆ ಕಾರಣಗಳೇನು?
6. ರಾಜ್ಯದ ಹಲವೆಡೆ ವಿಶೇಷವಾಗಿ ಕರಾವಳಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನೈತಿಕ ಪೊಲೀಸ್‍ಗಿರಿ ಕಾಂಗ್ರೆಸ್ ಆಳ್ವಿಕೆಯಲ್ಲೂ ಮುಂದುವರಿದಿದ್ದರೂ ಮೃದು ಧೋರಣೆ ತಳೆಯಲಾಗಿದೆ ಏಕೆ?
7. ಎರಡೂವರೆ ವರ್ಷಗಳಾದರೂ ಸಚಿವರ ಇಲಾಖೆ ಸಾಧನೆಗಳ ಮೌಲ್ಯಮಾಪನ ಆಗಲ್ಲ ಏಕೆ? ಕಚೇರಿಗೆ ಬಾರದ ಸಚಿವರಿಗೆ ಸಿಎಂ/ರಾಜ್ಯಾಧ್ಯಕ್ಷರು ಚಾಟಿ ಬೀಸುತ್ತಿಲ್ಲ ಏಕೆ?
8. ಮುಖ್ಯಮಂತ್ರಿಯವರ ಆಪ್ತವಲಯದಲ್ಲಿ ಸೂಕ್ಷ್ಮಮತಿಗಳು, ತಜ್ಞರ ಬದಲು ಸ್ವಹಿತಾಸಕ್ತಿವುಳ್ಳ ವ್ಯಕ್ತಿಗಳೇಸುತ್ತುವರಿದಿದ್ದಾರೆ ಎಂಬ ಆರೋಪವಿದೆ?
9. ರಾಮಕಥಾ ಗಾಯಕಿ ಅತ್ಯಾಚಾರ ಪ್ರಕರಣದಲ್ಲಿ ವಿಳಂಬ ನೀತಿ ಏಕೆ?
10. ಸರ್ಕಾರದ ಅಸ್ತಿತ್ವದ ಬಗ್ಗೆಯೇ ಅನುಮಾನ ಮೂಡಿಸುವ ಬೆಳವಣಿಗೆಗಳಿಗೆ ಕಾರಣಗಳೇನು? ಕಳಸಾ ಬಂಡೂರಿ ತಿರುವು ಯೋಜನೆಗಳನ್ನು ನಿಭಾಯಿಸುವಲ್ಲಿ/
ಜನಾಭಿಪ್ರಾಯ ಮೂಡಿಸುವಲ್ಲಿ ವಿಫಲವಾಗಿದ್ದೇಕೆ?
11. ಬೆಟ್ಟಿಂಗ್, ಮಟ್ಕಾ ರಾಜಾರೋಷವಾಗಿ ನಡೆದಿದ್ದರೂ, ಮಾಧ್ಯಮಗಳು ಬಹಿರಂಗಪಡಿಸಿದರೂ, ಕ್ರಮ ಜರುಗಿಲ್ಲ ಏಕೆ? ಹಾಗೆಯೇ ಸಂಶೋಧಕ ಕಲಬುರ್ಗಿ ಹತ್ಯೆ ನಂತರ ಬುದ್ಧಿಜೀವಿ/ಸಾಹಿತ್ಯ
ವಲಯದಲ್ಲಿ ಸೃಷ್ಟಿಯಾಗುವ ಅಭದ್ರತೆ ವಾತಾವರಣ ನಿವಾರಣೆಗೆ ಕ್ರಮಕೈಗೊಂಡಿಲ್ಲ ಏಕೆ? ಹತ್ಯೆ ನಡೆದ ಸಂದರ್ಭದಲ್ಲಿನ ಸರ್ಕಾರದ ನಡೆಯೂಪ್ರಶ್ನಾತೀತವಾಗಿರಲಿಲ್ಲ.
12. ಲೋಕಾಯುಕ್ತ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ರಕ್ಷಣೆ ಹಿಂದಿರುವ ಶಕ್ತಿಗಳಾವುವು?
13. ಸಿಎಂ ಚಿಂತಕರ ಚಾವಡಿ, ಅದರಲ್ಲಿರುವ ಸದಸ್ಯರು ಸ್ವಹಿತಾಸಕ್ತಿಗಳ ಹೊರತಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಆರೋಪಗಳಿವೆಯಲ್ಲ?
14. ಹೆಚ್ಚು ಪ್ರಮಾಣದ ಹೂಡಿಕೆ ಆಕರ್ಷಿಸುವಲ್ಲಿ ವಿಫಲವಾದ ಕೈಗಾರಿಕೆ ವಲಯ 7 ರಿಂದ 9ನೇ ಸ್ಥಾನಕ್ಕೆ ಕುಸಿಯಲು ಕಾರಣಗಳೇನು? ಬೆಂಗಳೂರನ್ನು ಸ್ಟಾರ್ಟ್‍ಅಪ್ ಸಿಟಿ ಎಂದು ಬಿಂಬಿಸಲು ಇದ್ದ ಅವಕಾಶಗಳನ್ನು ಕೈ ಚೆಲ್ಲಿದ್ದೇಕೆ?
15. ಅಹಿಂದ ವರ್ಗಗಳ ಪರ ಅನ್ನುವ ಬದಲು ಎಲ್ಲ ವರ್ಗಗಳ ಶೋಷಿತರ ಪರ ಇದ್ದೇವೆ ಎಂದುಬಿಂಬಿಸಿಕೊಳ್ಳಬೇಕಿತ್ತಲ್ಲವೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics