ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯಾಗಮನದ ಬಗ್ಗೆ ರೈತರ ನಿರೀಕ್ಷೆಗಿಂತ, ಕಾಂಗ್ರೆಸ್ ನಾಯಕರಲ್ಲೇ ತಳಮಳ ಹೆಚ್ಚಾಗಿದೆ.
ಸಂಪುಟ ವಿಸ್ತರಣೆ ಕುರಿತ ಚರ್ಚೆ ನಡೆಯುತ್ತಿರುವಾಗಲೇ ಗುರುವಾರ ಸಂಜೆ ಕರ್ನಾಟಕ ಉಸ್ತುವಾರಿ ದಿಗ್ವಿಜಯ ಸಿಂಗ್ ರಾಜ್ಯಕ್ಕೆ ಬಂದು, ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ, ಸಲೀಂ ಅಹ್ಮದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವುದು ಕಾಂಗ್ರೆಸ್ನಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಸಂಜೆ ಕೆಪಿಸಿಸಿ ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ರಾಹುಲ್ ಮಾತನಾಡಲಿ ದ್ದು, ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಸ್ಪೋಟಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು ಇದರ ಶಮನಕ್ಕೆ ಸಿಎಂ ಬಣ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದೆ. ಇಲ್ಲಿವರೆಗೆ ನಿಷ್ಕ್ರಿಯವಾದಂತೆ ಇದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ರಾಹುಲ್ ಗಾಂಧಿ ಅವರ ರಾಜ್ಯದ ವಿವಿಧ ಕಾರ್ಯಕ್ರಮಗಳ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎರಡು ದಿನಗಳ ಭೇಟಿಗಾಗಿ ಶುಕ್ರವಾರ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಲ್ಲಿ ರಾಹುಲ್ ಮೇನಿಯಾ ಆರಂಭವಾಗಿದ್ದು, ಉಪಾಧ್ಯಕ್ಷರ ಕಾರ್ಯಕ್ರಮ ಯಶಸ್ಸುಗೊಳಿಸುವುದಕ್ಕೆ ಭಾರಿ ಪ್ರಯತ್ನ ನಡೆಯುತ್ತಿದೆ. ರೈತರೊಂದಿಗಿನ ಮುಖಾಮುಖಿಗಾಗಿ ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡಿರುವ ಎರಡು ಜಿಲ್ಲೆಗಳು ರಾಜಕೀಯವಾಗಿ ತುಂಬಾ ಸೂಕ್ಷ್ಮವಾಗಿವೆ. ಮಾತ್ರವಲ್ಲ ಇವೆರಡು ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯದಲ್ಲಿ 56 ಮತ್ತು ಹಾವೇರಿಯಲ್ಲಿ 44 ರೈತರು ಸಾಲಬಾಧೆ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿದ್ದು, ರಾಜಕೀಯವಾಗಿ ಪ್ರತಿಪಕ್ಷಗಳು ಈ ಜಿಲ್ಲೆಯಲ್ಲಿ ಸಮಬಲವಾಗಿವೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸಂಘಟನೆಗೆ ಕಾಂಗ್ರೆಸ್ನ ರಾಜ್ಯ ಮುಖಂಡರು ವಿಶೇಷ ಕಾಳಜಿ ನೀಡಿದ್ದು, ಯಾವುದೇ ಮುಜುಗರ ಸೃಷ್ಟಿಯಾಗದಂತೆ ಸೂಚನೆ ನೀಡಲಾಗಿದೆ.
ಹಾವೇರಿ ಕಾರ್ಯಕ್ರಮದ ಜವಾಬ್ದಾರಿಯನ್ನು ಸಚಿವ ಸ್ಥಾನಾಕಾಂಕ್ಷಿ ಹಿರಿಯ ಮುಖಂಡ ಕೆ.ಬಿ.ಕೋಳಿವಾಡ ಅವರಿಗೆ ನೀಡಲಾಗಿತ್ತು. ಆದರೆ ರಾಹುಲ್ ಸಮಾವೇಶ ವೇದಿಕೆಗೆ ರೈತನ ಹೊಲವನ್ನು ನಾಶ ಮಾಡಲಾಗಿದೆ ಎಂಬ ಸುದ್ದಿ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿರುವುದರಿಂದ ಕಾಂಗ್ರೆಸ್ ಮುಖಂಡರಿಗೆ ತುಸು ಇರಿಸುಮುರಿಸಾಗಿದೆ. ಹೀಗಾಗಿ ಮಂಡ್ಯ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡಲಾಗಿದೆ. ಸಚಿವರೊಂದಿಗೆ ಸಭೆ: ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸುವ ರಾಹುಲ್ ಗಾಂಧಿ ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಮಂಡ್ಯ ತಲುಪುವರು. ರಾಜ್ಯದ 6 ಸಚಿವರ ಜತೆಗೆ ಉನ್ನತಮಟ್ಟದ ಸಭೆ ಆಯೋಜಿಸಲಾಗಿದೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಸಹಕಾರ ಸಚಿವ ಮಹದೇವ ಪ್ರಸಾದ್, ವಸತಿ ಸಚಿವ ಅಂಬರೀಶ್, ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದ ಕೃಷಿ ಮತ್ತು ನೀರಾವರಿ ಸಮಸ್ಯೆ, ಅದನ್ನು ಬಗೆಹರಿಸಲು ಸರ್ಕಾರ ತೆಗೆದುಕೊಂಡ ಕ್ರಮ, ಸಾಲದ ಸಮಸ್ಯೆ, ಸಾಲದ ಹೊರೆ ಹಾಗೂ ಅದನ್ನು ಬಗೆಹರಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ನಂತರ ಕೊತ್ತಲೆ ಮತ್ತು ಪಣತ್ತನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ 35 ವಿದ್ಯಾರ್ಥಿಗಳು, 35 ಕೃಷಿ ತಜ್ಞರು, 35 ವಿಜ್ಞಾನಿಗಳು, 35 ಪ್ರಗತಿಪರ ರೈತರು ಮತ್ತು ಚಿಂತಕರು, ರೈತರ ಜತೆಗೆ ಕೃಷಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದ್ದಾರೆ.
ಗರಿಗೆದರುತ್ತದೆ ರಾಜಕೀಯ
ರಾಹುಲ್ ಗಾಂಧಿ ಅವರ ಇಷ್ಟೆಲ್ಲ ಬಿಡುವಿಲ್ಲದ ಕಾರ್ಯಕ್ರಮದ ಮಧ್ಯೆಯೇ ಬೆಂಗಳೂರಿನಲ್ಲಿ ಮಾತ್ರ ರಾಜಕೀಯ ಚಟುವಟಿಕೆಗಳು ಗರಿಗೆದರುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಅರಮನೆ ಮೈದಾನದಲ್ಲಿ ಕಾಂಗ್ರೆಸ್ನಿಂದ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಗೊಂಡ ಸದಸ್ಯರ ಜತೆಗೆ ಸಂವಾದ ಆಯೋಜಿಸಲಾಗಿದೆ. ಆ ಬಳಿಕ ನಾಲ್ಕು ಗಂಟೆಗೆ ಕೆಪಿಸಿಸಿ ಸರ್ವ ಸದಸ್ಯ ಸಭೆ ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಕಾಂಗ್ರೆಸ್ನ ಅಸಮಾಧಾನ ಸ್ಪೋಟಗೊಳ್ಳುವ ಎಲ್ಲ ಸಾಧ್ಯತೆಗಳು ದಟ್ಟವಾಗಿದ್ದು, ತೆರೆಮರೆಯಲ್ಲಿ ಅಸಮಾಧಾನ ಶಮನಕ್ಕೆ ಸಿಎಂ ಬಣ ಚಾಲನೆ ನೀಡಿದೆ. ಅದೇ ರೀತಿ ಸಾಯಂಕಾಲ 5 ಗಂಟೆ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿ ಆಚರಣೆ ಸಂಬಂಧ ಪರಿಶಿಷ್ಟ ಜಾತಿಯ ಮುಖಂಡರ ಜತೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಲಿದ್ದು, ದಲಿತ ಸಿಎಂ ವಿಚಾರ ಮತ್ತೆ ಮಾರ್ದನಿಸಬಹುದೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ವಿಶೇಷ ಪ್ಯಾಕೇಜೋ, ಸಾಲ ಮನ್ನಾವೋ?
ಬಹು ಪ್ರಚಾರ ಪಡೆಯುತ್ತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ಬಳಿಕ ಸಾಲ ಮನ್ನಾ ಅಥವಾ ರೈತ ಪ್ಯಾಕೇಜ್ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದ್ದು, ಒಂದೊಮ್ಮೆ ಸಾಲ ಮನ್ನಾವೇ ಖಾತ್ರಿ ಆದರೆ ಅದರ ಲಾಭ ಪಡೆಯುವ ಫಲಾನುಭವಿಗಳ ಸಂಖ್ಯೆ ಮಾತ್ರ ಕಡಿಮೆಯಾಗಲಿದೆ. ಹೌದು. ಮಂಡ್ಯದಲ್ಲಿ ಶುಕ್ರವಾರ ಬೆಳಗ್ಗೆ ಸಚಿವ ಸಮೂಹದ ಜತೆಗೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದು, ಆ ಬಳಿಕ ರೈತರಿಗೆ ಪ್ಯಾಕೇಜ್ ನೀಡುವ ಬಗ್ಗೆ ಸಲಹೆ ನೀಡುವ ಸಾಧ್ಯತೆ ಇದೆ. ರಾಹುಲ್ ಭೇಟಿ ಬಳಿಕ ಆದ ಲಾಭಗಳೇನು? ಎಂಬ ಟೀಕೆ ಎದುರಿಸುವುದನ್ನು ತಪ್ಪಿಕೊಳ್ಳುವುದಕ್ಕಾಗಿ ಯಾವುದಾದರೊಂದು ಮಹತ್ವದ ಘೋಷಣೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.