ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಾವೇರಿಯಲ್ಲಿ ಸಿಎಂರಿಂದ ಸಾಲ ಮನ್ನಾ ಘೋಷಣೆ: ರೈತರಿಗೆ ಇಂದೇ ಸಿಹಿ

ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರ ಸಾಲ ಮನ್ನಾ ಬೇಡಿಕೆ ಈಡೇರಿಸುವಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರಕ್ಕೆ...

ಮಂಡ್ಯ ಜಿಲ್ಲೆಯ ಸಣಬದ ಕೊಪ್ಪಲಿನಲ್ಲಿ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ್ ನಿವಾಸಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಅವರ ಕುಟುಂಬ ಸದ
Mainashree
Updated On : 10 Oct 2015, 8:53 am
ಮಂಡ್ಯ: ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರ ಸಾಲ ಮನ್ನಾ ಬೇಡಿಕೆ ಈಡೇರಿಸುವಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರಕ್ಕೆ ಸೂಚಿಸಿದ್ದಾರೆ. ಮಾತ್ರವಲ್ಲ, ``ನಾಳೆ (ಶನಿವಾರ) ನಿಮಗೆ ಸಿಹಿ ಸುದ್ದಿ ಕಾದಿದೆ. ಸಾಲಮನ್ನಾ ಸೇರಿದಂತೆ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹಲವು ಕ್ರಮಗಳನ್ನು ಮುಖ್ಯಮಂತ್ರಿ ಹಾವೇರಿಯಲ್ಲಿ ಘೋಷಿಸಲಿದ್ದಾರೆ'' ಎಂದೂ ರಾಹುಲ್ ರೈತರಿಗೆ ಅಭಯ ನೀಡಿದ್ದಾರೆ. 

ವಿ.ಸಿ.ಫಾರ್ಮ್ ನ ಕೃಷಿ ಮಹಾವಿದ್ಯಾಲ- ಯದಲ್ಲಿ ರೈತರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಈ ವಿಷಯ ಪ್ರಕಟಿಸಿದರು. ಆದರೆ, ಸಾಲಬಾಧೆ ತಾಳಲಾರದೆ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಮಂಡ್ಯ ಜಿಲ್ಲೆಗೆ ರಾಹುಲ್ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಇನ್ನೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. 

Advertisement

Advertisement


``ಕರ್ನಾಟಕದ ರೈತರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ನಾನು ಭೇಟಿಕೊಟ್ಟಿರುವ ಎರಡೂ ಗ್ರಾಮಗಳ ರೈತರ ಕುಟುಂಬಗಳ ಸಂಕಷ್ಟ ಆಲಿಸಿದ್ದೇನೆ. ರೈತರ ವಾಸ್ತವ ಸಮಸ್ಯೆಗಳು, ಬಿಕ್ಕಟ್ಟುಗಳು ಭಯಾನಕವಾಗಿವೆ. ಮಳೆ ಇಲ್ಲ, ಬೆಳೆ ಕೈಕೊಟ್ಟಿದೆ. ಸಾಲದ ಹೊರೆ ಹೆಚ್ಚಾಗಿದೆ. ಈ ಎಲ್ಲಾ ಅಂಶಗಳು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧವಾಗಿ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರವೂ ಬದ್ಧವಾಗಿದೆ'' ಎಂದು ಅವರು ಹೇಳಿದರು. 

ಕೇಂದ್ರದ ಬೇಜವಾಬ್ದಾರಿ: ಕೇಂದ್ರ ಸರ್ಕಾರವ ನ್ನು ತರಾಟೆಗೆ ತೆಗೆದುಕೊಂಡ ಅವರು, ಕೇಂದ್ರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ.ಕೃಷಿ ವಲಯವನ್ನು ನಿರ್ಲಕ್ಷ್ಯ ಮಾಡಲಾಗಿದೆ. ರೈತರನ್ನೂ ಕೂಡ ಕರ್ನಾಟಕ, ಮಹಾರಾಷ್ಟ್ರ, ಬಿಹಾರದವರೆಂದು ಇಬ್ಭಾಗ ಮಾಡಿ ನೋಡುವ ಮನೋಭಾವ ಬೆಳೆದಿದೆ. ಆದರೆ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತದ ರೈತರು ಎಂದು ನಾವು ಪರಿಗಣನೆ ಮಾಡುತ್ತಿದ್ದೆವು. 

ಯುಪಿಎ ಸರ್ಕಾರ ರೈತರ ರು. 70 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಿತ್ತು. ಪ್ರಧಾನಿ ಮೋದಿಯವರಿಗೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ವಿದೇಶಗಳಿಗೆ ಸುತ್ತಿ ಬರಲು ಅವರಿಗೆ ಸಮಯ ಇದೆ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಸಂಕಷ್ಟದಲ್ಲಿರುವ ರೈತರನ್ನು ಕಂಡು ಸಂತೈಸಲು ಮಾತ್ರ ಸಮಯ ಇಲ್ಲ ಎಂದು ವ್ಯಂಗ್ಯವಾಡಿದರು. ಇದಕ್ಕೂ ಮುನ್ನ ನಡೆದ ಸಂವಾದದಲ್ಲಿ ಭಾಗವಹಿಸಿದ್ದ ರೈತರು``ಕೃಷಿ ಸಾಲ ಮನ್ನಾ ಮಾಡಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಿ ಜೀವ ಉಳಿಸಿ'' ಎಂದು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದರು. 

ಸಂವಾದದಲ್ಲಿಪಾಲ್ಗೊಂಡಿದ್ದ ವಿ.ಸಿ.ಫಾರ್ಮ್  ಕೃಷಿ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ವನ್ನು ಹೇಗೆ ಅಭಿವೃದ್ದಿ ಪಡಿಸಬೇಕು ಎಂಬುದರ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು.

ರೈತರ ಮನೆಗೆ ಭೇಟಿ: ರಾಹುಲ್ ಗಾಂಧಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಇಬ್ಬರು ರೈತರ ನಿವಾಸಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪಾಂಡವಪುರ ತಾಲೂಕು ಸೆಣಬದಕೊಪ್ಪಲುವಿನ ರೈತ ಲೋಕೇಶ್ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದ ರಾಹುಲ್ ಮೊದಲು ಆ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಲು ನಿರ್ಧರಿಸಿದರು. ಅದರಂತೆ ಮಂಡ್ಯದಿಂದ ಅಲ್ಲಿಗೆ ತೆರಳಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. 

ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಆಲಿಸಿದರು. ಅಲ್ಲಿಯೇ ಕೆ.ಆರ್. ಪೇಟೆ ತಾಲೂಕು ಸಂತೇಬಾಚಹಳ್ಳಿ ಹೋಬಳಿ ಯ ನಾಯಿಸಿಂಗನಹಳ್ಳಿಯ ಮಹದೇವಯ್ಯ (65) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿ ರುವ ಸಮಾಚಾರ ತಿಳಿಯಿತು. ನೇರ ಅಲ್ಲಿಗೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕೊನೆಕ್ಷಣದಲ್ಲಿ ಕಾರ್ಯಕ್ರಮ ಬದಲಾದ್ದರಿಂದ ಕೊತ್ತತ್ತಿ ಗ್ರಾಮದ ಮೃತ ರೈತ ಮಾದೇಗೌಡರ ಮನೆ ಭೇಟಿಯನ್ನು ರಾಹುಲ್ ಗಾಂಧಿ ರದ್ದುಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments