ಪ್ರಧಾನ ಸುದ್ದಿ

ಟಿಬೆಟ್ ನಲ್ಲಿ ಬ್ರಹ್ಮಪುತ್ರದ ಅಣೆಕಟ್ಟನಿಂದ ವಿದ್ಯುತ್ ಉತ್ಪಾದನೆ ಆರಂಭಿಸಿದ ಚೀನಾ

Guruprasad Narayana

ಬೀಜಿಂಗ್: ೧.೫ ಬಿಲಿಯನ್ ಡಾಲರ್ ವೆಚ್ಚದಲ್ಲಿ ಟಿಬೆಟ್ಟಿನ ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ಕಟ್ಟಿರುವ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆಯನ್ನು ಚೀನಾ ಪ್ರಾರಂಭಿಸಿದೆ. ದೇಶಕ್ಕೆ ಬ್ರಹ್ಮಪುತ್ರ ನೀರಿನ ಪೂರೈಕೆಯಲ್ಲಿ ವ್ಯತ್ಯವಾಗುವುದೆಂದ ಭಾರತ ಇದನ್ನು ವಿರೋಧಿಸಿತ್ತು.

ಟಿಬೆಟ್ ನಲ್ಲಿ ಹರಿಯುವ ಬ್ರಹ್ಮ ಪುತ್ರ ನದಿಯ ಜಲ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಜಾಂಗ್ಮು ಹೈಡ್ರೋ ಪವರ್ ಸ್ಟೇಶನ್ ನನ್ನು ಚೀನಾ ನಿರ್ಮಿಸಿದೆ. ಇದು ಟಿಬೆಟ್ ನ ಮಧ್ಯ ಭಾಗಕ್ಕೆ ವಿದ್ಯುತ್ ಪೂರೈಸಲಿದೆ ಎನ್ನಲಾಗಿದೆ. ಬ್ರಹ್ಮಪುತ್ರ ನದಿ ಟಿಬೆಟ್ ನಲ್ಲಿ ಹುಟ್ಟಿ, ಭಾರತಕ್ಕೆ ನಂತರ ಬಾಂಗ್ಲಾ ದೇಶಕ್ಕೆ ಹರಿಯುವುದಲ್ಲದೆ, ಇದು ಈ ಮೂರೂ ದೇಶಗಳಿಗೆ ನೀರು ಒದಗಿಸುವ ಪ್ರಮುಖ ಮೂಲವಾಗಿದೆ.

ವಿಶ್ವದ ಅತಿ ಎತ್ತರದ ಜಲವಿದ್ಯುತ್ ಕೇಂದ್ರ ಇದಾಗಿದ್ದು ವರ್ಷಕ್ಕೆ ೨.೫ ಬಿಲಿಯನ್ ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.

ಭಾರತದ ಆತಂಕವನ್ನು ತಳ್ಳಿಹಾಕಿರುವ ಚೀನಾ, ಈ ಅಣೆಕಟ್ಟುಗಳು ನೀರನ್ನು ಸಂಗ್ರಹಿಸುವುದಿಲ್ಲ ಬದಲಾಗಿ ಹರಿಯುವ ನೀರನ್ನು ಉಪಯೋಗಿಸಿಕೊಂಡು ಕಟ್ಟಲಾಗಿರುವ ಜಲವಿದ್ಯುತ್ ಕೇಂದ್ರ ಎಂದಿದೆ.

ಸಂಘರ್ಷದ ಸಮಯದಲ್ಲಿ ಚೀನಾ ಸಂಗ್ರಹವಾದ ನೀರನ್ನು ಬಿಟ್ಟರೆ ಪ್ರವಾಹದಂತಹ ಸ್ಥಿತಿ ಕೂಡ ಉಂಟಾಗುವ ಆತಂಕವನ್ನು ಭಾರತ ವ್ಯಕ್ತಪಡಿಸಿತ್ತು. ಹಲವು ವರ್ಷಗಳಿಂದ ಈ ವಿಷಯವಾಗಿ ಚೀನಾ ಜೊತೆ ಚರ್ಚಿಸಿದ್ದರು, ಬಾಗುವುದಕ್ಕೆ ಚೀನಾ ನಿರಾಕರಿಸಿದೆ.

SCROLL FOR NEXT