ಮೈಸೂರು: ಎಚ್.ಡಿ. ಕೋಟೆ ತಾಲೂಕು ಮಲಾರ ಕಾಲೋನಿಯ ಪ್ರಗತಿ ಪರ ರೈತ ಪುಟ್ಟಯ್ಯ ಅವರು ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮಂಗಳವಾರ ವಿದ್ಯುಕ್ತ ಚಾಲನೆ ನೀಡಿದರು.
ಇಂದು ಬೆಳಗ್ಗೆ 11.05ರ ಶುಭ ಧನುರ್ ಲಗ್ನದಲ್ಲಿ ಅಧಿ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುಟ್ಟಯ್ಯ ಅವರು ಐತಿಹಾಸಿಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡಿಬೆಟ್ಟದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಶಾಸಕ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದರು.
ಈ ಬಾರಿ ದಸರಾ ಅ.23 ರಂದು ಜಂಬೂಸವಾರಿಯೊಂದಿಗೆ ಮುಕ್ತಾಯವಾಗಲಿದೆ. ದೇಶ ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆದುಕೊಳ್ಳುವ ನಾಡಹಬ್ಬ ದಸರೆಗಾಗಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ಸಾಮಾನ್ಯವಾಗಿ ದಸರೆ 9 ಅಥವಾ 10 ದಿನಗಳು ನಡೆಯುತ್ತದೆ. ಈ ಬಾರಿ 11 ದಿನಗಳು ನಡೆಯುತ್ತಿರುವುದು ವಿಶೇಷ.