ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚಿಗೆ ಮಂಡ್ಯ ಜಿಲ್ಲೆ ಸಣಬದಕೊಪ್ಪಲು ಮೃತ ರೈತ ಲೋಕೇಶ್ ಕುಟುಂಬಕ್ಕೆ ನೀಡಿದ್ದ ಚೆಕ್ ರಾಜಕೀಯ ಇದೀಗ ಮತ್ತಷ್ಟು ಚುರುಕುಗೊಂಡಿದ್ದು, ಈ ಸಂಬಂಧ ಮಂಡ್ಯ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಇಂದು ಮಧ್ಯಾಹ್ನ ಸೋನಿಯ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ರಮ್ಯಾ, ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಆದರೆ ಭೇಟಿಯ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಚೆಕ್ ವಿತರಣೆಗೆ ಗೊಂದಲ ಕುರಿತಂತೆ ಸೋನಿಯಾ ಗಾಂಧಿ ಅವರಿಗೆ ರಮ್ಯಾ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ವಸತಿ ಸಚಿವ ಅಂಬರೀಶ್ ವಿರುದ್ಧ ದೂರು ನೀಡಿರುವ ಸಾಧ್ಯತೆಗಳಿರುವುದಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸೋನಿಯಾ ಭೇಟಿಯ ಬಳಿಕ ರಮ್ಯಾ ಚೆಕ್ ವಿವಾದಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಮೂಲಕ ಮಂಡ್ಯ ಜನತೆ ಸಂದೇಶ ನೀಡಿದ್ದು, ನನ್ನ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.