ಚೆನ್ನೈ: ಚೆನ್ನೈ ಪ್ರಾದೇಶಿಕ ವಿದ್ಯುಚ್ಚಕ್ತಿ ಚಾಲಿತ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಬಿದ್ದ ಕಾರಣ ನವರಾತ್ರಿ ಹಬ್ಬದ ದಿನ ಜನರಲ್ಲಿ ಆತಂಕ ಮೂಡಿಸಿತ್ತು. ಬುಧವಾರ ಬೆಳಗ್ಗೆ ೮:೩೦ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಆದರೆ ಯಾವ ಪ್ರಯಾಣಕನಿಗೂ ಹಾನಿಯಾಗಿಲ್ಲ.
ಸುಮಾರು ೮:೫೦ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು ೯ ಬೋಗಿಗಳ ರೈಲಿನಿಂದ ಬೆಂಕಿಗೆ ಆಹುತಿಯಾದ ಬೋಗಿಗಳನ್ನು ಬೇರ್ಪಡಿಸಲಾಗಿದೆ. ವೇಲಾಚಾರಿಯಿಂದ ಚೆನ್ನೈ ಬೀಚಿನ ಕಡೆಗೆ ರೈಲು ಪ್ರಯಾಣ ಬೆಳೆಸಿತ್ತು.
ಎರಡು ಬೋಗಿಗಳು ಸುಟ್ಟು ಕರುಕಲಾಗಿವೆ ಎಂದು ತಿಳಿದುಬಂದಿದೆ. ಪ್ರತ್ಯಕ್ಷದರ್ಶಿಯ ಪ್ರಕಾರ ರಸ್ತೆ ಮಾರ್ಗಗಳು ಸುಸ್ಥಿತಿಯಲ್ಲಿ ಇಲ್ಲದೆ ಹೋದದ್ದರಿಂದ ಅಗ್ನಿಶಾಮಕ ದಳ ಆಗಮಿಸುವುದು ತಡವಾಗಿದೆ.
ಮೂಲಗಳ ಪ್ರಕಾರ ಈ ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕಿಟ್ ಕಾರಣ ಎನ್ನಲಾಗಿದೆ ಆದರೆ ಅಧಿಕಾರಿಗಳು ವಿವರವಾದ ತನಿಖೆಯಾದ ನಂತರವಷ್ಟೇ ಕಾರಣ ತಿಳಿಸಲು ಸಾಧ್ಯ ಎಂದಿದ್ದಾರೆ.