ಮೈಸೂರು: ವಿಜಯದಶಮಿ ಪ್ರಯುಕ್ತ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಡಗರ ಸಂಭ್ರಮದೊಂದಿಗೆ ಆಯುಧ ಪೂಜೆ ಆಚರಿಸಲಾಯಿತು.
ಯದುವಂಶಕ್ಕೆ ನೂತನವಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಇದು ಪ್ರಥಮ ದಸರಾ ಆಗಿತ್ತು. ಹೀಗಾಗಿ ಸಹಜವಾಗಿಯೇ ಅರಮನೆಯಲ್ಲಿ ಸಂಭ್ರಮ ಕಂಡುಬಂತು.
ಬೆಳಗ್ಗೆ ೫.೩೦ಕ್ಕೆ ಅರಮನೆ ಆನೆಬಾಗಿಲಿನ ಮೂಲಕ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳನ್ನು ಬರಮಾಡಿಕೊಳ್ಳುವುದರೊಂದಿಗೆ ಆಯುಧ ಪೂಜೆಗೆ ಚಾಲನೆ ದೊರೆಯಿತು. ಬಳಿಕ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಶುಕ್ರವಾರ ಜಂಬೂಸವಾರಿ ನಡೆಯಲಿದೆ. ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ನಾಡಹಬ್ಬ ಸರಳವಾಗಿ ನಡೆಯಲಿದೆ.