ಪ್ರಧಾನ ಸುದ್ದಿ

ಕಾಲರ್ ಹಿಡಿದ ಎಸ್ಸೈ ತಪ್ಪಿಸಿಕೊಳ್ಳಲು ಇರಿದೆ!

ಬೆಂಗಳೂರು: `ಪರಾರಿಯಾಗುತ್ತಿದ್ದ ನಮ್ಮನ್ನು ಅಟ್ಟಿಸಿಕೊಂಡು ಬಂದು ಹಿಡಿದ ಎಸ್ಸೈರಿಂದ ತಪ್ಪಿಸಿಕೊಳ್ಳಲು ಚಾಕುವಿನಿಂದ ಇರಿದೆವು' ದೊಡ್ಡಬಳ್ಳಾಪುರ ಟೌನ್ ಎಸ್ಸೈ ಜಗದೀಶ್ ಕೊಲೆ ಪ್ರಕರಣ ಆರೋಪಿಗಳಾದ ಹರೀಶ್ ಬಾಬು ಹಾಗೂ ಮಧುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳು ನೀಡಿರುವ ಅಧಿಕೃತ ಮಾಹಿತಿ ಇದು.

ಪರಾರಿಯಾಗುತ್ತಿದ್ದಾಗ ಎಸ್ಸೈ ಕಾಲರ್ ಪಟ್ಟಿ ಹಿಡಿದುಕೊಂಡರು. ತಪ್ಪಿಸಿಕೊಳ್ಳಲು ಚಾಕುವಿನಿಂದ ಇರಿದೆ. ಅವರ ಕೈಯಲ್ಲಿ ಪಿಸ್ತೂಲ್ ಇತ್ತು. ಶೂಟ್ ಮಾಡುತ್ತಾರೆ ಎನ್ನುವ ಕಾರಣಕ್ಕೆ ಇರಿದೆ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಎಸ್ಸೈ ಇರಿತದಿಂದ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದರೂ ಬಿಡದೆ ಡ್ಯಾಗರ್‍ನಿಂದ ಇರಿದಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದ ಕಾನ್ಸ್‍ಟೇಬಲ್ ವೆಂಕಟೇಶ್ ಅವರನ್ನು ಆರೋಪಿ ಚಾಕುವಿನಿಂದ ಇರಿದಿದ್ದ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದ್ದು ಎಸ್ಸೈ ಜಗದೀಶ್ ಹತ್ಯೆ ಪ್ರಕರಣದ ವಿಚಾರಣೆಯನ್ನು ಮೊದಲು ಪೂರ್ಣಗೊಳಿಸುತ್ತೇವೆ. ಹತ್ಯೆ ಪ್ರಕರಣ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದರಿಂದ ಅಲ್ಲಿ ಕಳ್ಳತನ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ. ಅದು ಪೂರ್ಣಗೊಂಡ ಬಳಿಕ ಆರೋಪಿಗಳ ಎಲ್ಲಾ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ. ದಾಖಲಾಗದ, ಪತ್ತೆಯಾಗದ ಪ್ರಕರಣಗಳು, ಅಧಿಕಾರಿಗಳ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಗತ್ಯ ಬಿದ್ದರೆ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತಷ್ಟು ದಿನ ವಶಕ್ಕೆ ಪಡೆಯಲಾಗುವುದು ಎಂು ಕೇಂದ್ರ ವಲಯ ಐಜಿಪಿ ಅರುಣ ಚಕ್ರವರ್ತಿ ತಿಳಿಸಿದರು.

ಸ್ಥಳ ಪರಿಶೀಲನೆ:
ಆರೋಪಿಗಳು ಖರೀದಿಸಿದ್ದ ಬೈಕ್ ದಾಖಲೆ ಮಾಹಿತಿ ಪಡೆಯಲು ನೆಲಮಂಗಲದ ಶೋರೂಮ್ ಹಾಗೂ ಕೊಲೆ ನಡೆದ ಜಾಗದ ಸ್ಥಳ ಪರಿಶೀಲನೆ ನಡೆಯಿತು. ಅರೋಪಿಗಳನ್ನು ಭದ್ರತೆಯಲ್ಲಿ ಕರೆತರಲಾಗಿತ್ತು.

ಜಗದೀಶ್ ರಿಂದ ದೋಚಿದ್ದ ಪಿಸ್ತೂಲ್ ನಲ್ಲಿ 5 ಗುಂಡುಗಳಿದ್ದವು ಎಂದು ತನಿಖೆಯಲ್ಲಿ ದೃಢಪಟ್ಟಿದೆ. ಆದರೆ, ಆರೋಪಿಗಳಿಗೆ ಪಿಸ್ತೂಲ್ ಬಳಕೆ ಗೊತ್ತಿರಲಿಲ್ಲ. ಕೆಲದಿನ ದೆಹಲಿಯಲ್ಲಿ ತಲೆಮರೆಸಿಕೊಂಡು, ಪೊಲೀಸರ ಹುಡುಕಾಟ ಕಡಿಮೆಯಾಗುತ್ತಿದ್ದಂತೆ ಮಧುನನ್ನು ಕರ್ನೂಲ್ ನಲ್ಲಿ ಬಿಟ್ಟು ಹರೀಶ್ ಬಾಬು ನೇಪಾಳಕ್ಕೆ ಹೋಗುವ ಯೋಜನೆ ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದರು.

ಕಾಯಿಲೆಯ ದುರುಪಯೋಗ
ಆರೋಪಿ ಹರೀಶ್ ಬಾಬುಗೆ ಮಾರಣಾಂತಿಕ ಕಾಯಿಲೆ ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತವಾಗಿದೆ. ಇದೇ ವೇಳೆ ಆರೋಪಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ
ಮಾಡಿಸಿಕೊಂಡಿದ್ದು ಅದರ ದಾಖಲೆಗಳನ್ನು ಇರಿಸಿಕೊಂಡಿದ್ದಾನೆ.

ಪ್ರತಿ ಬಾರಿ ಪೊಲೀಸರಿಂದ ಬಂಧಿತನಾಗಿದ್ದ ವೇಳೆ, ತನಗೆ ಮಾರಣಾಂತಿಕ ಕಾಯಿಲೆ ಇರುವುದನ್ನು ಹೇಳಿ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ. ಈ ಕಾರಣದಿಂದಾಗಿ ಪೊಲೀಸರು ಎಂದಿನ ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸದೆ ಆರೋಪಿ ನೀಡುವ ಮಾಹಿತಿ ಆಧರಿಸಿ ವಸ್ತುಗಳನ್ನು ಜಪ್ತು ಮಾಡಿಕೊಂಡು ಜೈಲಿಗೆ ಕಳುಹಿಸುತ್ತಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬರುತ್ತಿದ್ದ ಆರೋಪಿ ಮತ್ತೆ ಕಳ್ಳತನ ಎಸಗುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

SCROLL FOR NEXT