ನವದೆಹಲಿ: ವಿಶ್ವವಿಖ್ಯಾತ ಛಾಯಾಗ್ರಾಹಕ ಮತ್ತು ಪತ್ರಕರ್ತ ಸ್ಟೀವ್ ಮೆಕ್ಕರಿ ಅವರ ನ್ಯಾಷನಲ್ ಜಿಯೋಗ್ರಾಫಿಕ್ ಪತ್ರಿಕೆಯ ಮುಖಪುಟದ ಮೇಲಿನ 'ಆಪ್ಘನ್ ಹುಡುಗಿ' ಚಿತ್ರ ವಿಶ್ವದಲ್ಲೇ ಮನೆಮಾತಾಗಿತ್ತು. ಸಂದರ್ಶನವೊಂದರಲ್ಲಿ ಭಾರತದ ಹೆಮ್ಮಯ ಮಾತುಗಳನ್ನಾಡಿರುವ ಅವರು "ಜಾತ್ಯಾತೀತತೆ ಮತ್ತು ಒಳಗೊಳ್ಳುವಿಕೆ ಭಾರತದ ಅದ್ಭುತ ಗುಣಗಳು" ಎಂದು ಗುಣಗಾನ ಮಾಡಿದ್ದಾರೆ.
'ಸ್ಟೀವ್ ಮೆಕ್ಕರಿ: ಭಾರತ' ಎಂಬ ಪುಸ್ತಕದ ನ್ಯೂಯಾರ್ಕ್ ನಗರದ ಬಿಡುಗಡೆಗೂ ಮುಂಚೆ ಐ ಎ ಎನ್ ಎಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು ತಮ್ಮ ಪುಸ್ತಕದಲ್ಲಿ ಭಾರತದಲ್ಲಿರುವ ವಿರೋಧಾಭಾಸಗಳು ಮತ್ತು ಉತ್ಸಾಹಗಳನ್ನು ಸೆರೆಹಿಡಿದಿದ್ದೇನೆ ಎಂದು ತಿಳಿಸಿದ್ದಾರೆ.
"ಭಾರತದ ಮಹತ್ವದ ಗುಣ ಎಂದರೆ ಜಾತ್ಯಾತೀತತೆ ಮತ್ತು ಒಳಗೊಳ್ಳುವಿಕೆ. ಈ ದೇಶ ಹಲವು ಧರ್ಮಗಳ, ಜಾತಿಗಳ, ಸಮುದಾಯಗಳ ಆಗರ. ಭಾರತದಲ್ಲಿನ ಹಲವು ಘಟನೆಗಳು ಬೆರಗು ಮೂಡಿಸುತ್ತವೆ ಅದೇ ಸಮಯದಲ್ಲಿ ಗೊಂದಲಕ್ಕೀಡು ಮಾಡುತ್ತವೆ" ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹಲವಾರು ದೇಶಗಳನ್ನು ಸುತ್ತಿರುವ ಅವರು "ತೆರೆದ ಮನ ಮತ್ತು ಮುಕ್ತವಾಗಿ ಮಾತನಾಡಬಲ್ಲ ವಾತಾವರಣ" ಭಾರತವನ್ನು ನೆಮ್ಮದಿಯ ಮತ್ತು ಸುರಕ್ಷಿತ ಪ್ರೆದೇಶವನ್ನಾಗಿಸಿದೆ ಎಂದಿದ್ದಾರೆ.
"ಕಾಶ್ಮೀರದಲ್ಲಿ ಯಾವಾಗಲೂ ಉದ್ವಿಗ್ನತೆ ಇದೆ ಎಂದೆನಿಸಿತು. ಒಮ್ಮೆ ನನ್ನ ಜೀವಕ್ಕೂ ಸಂಚಕಾರ ಇದೆ ಎಂದೆನಿಸಿತ್ತು" ಎಂದು ಮೆಕ್ಕರಿ ವಿವರಿಸುತ್ತಾರೆ.
ಇಲ್ಲಿಯವರೆಗೂ ೭೫ ಬಾರಿ ಭಾರತಕ್ಕೆ ಭೇಟಿ ನೀಡಿರುವ ಸ್ಟೀವ್ ಮೆಕ್ಕರಿ ತಮ್ಮ ಅನುಭವಗಳನ್ನು ಛಾಯಾಚಿತ್ರಗಳ ಮೂಲಕ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ.