ನವದೆಹಲಿ: ದೆಹಲಿಯಲ್ಲಿರುವ ಅತಿಥಿ ಗೃಹ ಕೇರಳ ಹೌಸ್ ಮೇಲೆ ದೆಹಲಿ ಪೊಲೀಸರು ಯಾವುದೇ ದಾಳಿ ನಡೆಸಿಲ್ಲ ಎಂದು ತಿಳಿಸಿರುವ ದೆಹಲಿ ಪೊಲೀಸ್ ಮಹಾನಿರ್ದೇಶಕ ಬಿ ಎಸ್ ಬಸ್ಸಿ, ಅತಿಥಿಗೃಹದ ಒಳಹೊಕ್ಕುವಾಗ ಕಾನೂನು ನಿಯಮಗಳನ್ನು ಪಾಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೇರಳ ಹೌಸ್ ಒಳಗೆ ಹೋಗುವುದಕ್ಕೆ ದೆಹಲಿ ಪೊಲೀಸರಿಗೆ ಯಾವುದೇ ಅಧಿಕಾರ ಇಲ್ಲ ಎಂದು ಮಂಗಳವಾರ ದೆಹಲಿ ಮುಖ್ಯಮಂತ್ರಿ ಟ್ವೀಟ್ಟರ್ ಮೂಲಕ ಟೀಕಿಸಿದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಬಸ್ಸಿ ನಾನು ಟ್ವೀಟ್ ನೋಡಿಲ್ಲ ಆದರೆ ಪೊಲೀಸರು ಕೇರಳ ಹೌಸ್ ಒಳಗೆ ಹೋಗುವಾಗ ಎಲ್ಲ ನಿಯಮಗಳನ್ನು ಪಾಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೇರಳ ಹೌಸ್ ನೆಲಮನೆಯಲ್ಲಿ ಬೀಫ್ ತಿನ್ನಲು ಅನುವುಮಾಡಿಕೊಡಲಾಗಿದೆ ಎಂದು ಹಿಂದು ಸೇನಾ ಸಂಸ್ಥೆಯ ವಿಷ್ಣು ಗುಪ್ತ ಎಂಬುವ ನೀಡಿದ್ದ ದೂರಿನ ಮೇರೆಗೆ ಪೊಲೀಸರ ತಂಡ ಸೋಮವಾರ ಸಂಜೆ ಕೇರಳ ಹೌಸ್ ಕ್ಯಾಂಟೀನಿನ ಮೇಲೆ ದಾಳಿ ನಡೆಸಿತ್ತು.
ವಿಚಾರಣೆ ಮಾಡಲು ಅತಿಥಿ ಗೃಹಕ್ಕೆ ಪೊಲೀಸರು ಹೋಗಿದ್ದರು ಹಾಗೂ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಕಣ್ಗಾವಲಿಡಲು ಅಲ್ಲಿನ ಭದ್ರತಾ ಸಿಬ್ಬಂದಿಗೆ ತಿಳಿಸಿರುವುದಾಗಿ ಬಸ್ಸಿ ಹೇಳಿದ್ದಾರೆ.
ಹಿಂದು ಸೇನ ದೂರು ನೀಡಿದ್ದ ಹಿನ್ನಲೆಯಲ್ಲಿ ಕೇರಳ ಹೌಸ್ ಕ್ಯಾಂಟೀನ್ ತನ್ನ ಮೆನುವಿನಿಂದ ಬೀಫ್ ಖಾದ್ಯವನ್ನು ತೆಗೆದುಹಾಕಿತ್ತು.