ನವದೆಹಲಿ: ಇಂಗ್ಲೆಂಡಿನಲ್ಲಿ ಶನಿವಾರ ಪ್ರಾರಂಭವಾಗಲಿರುವ ಎರಡು ದಿನಗಳ ಸಿಖ್ ಸಮಾವೇಶದಲ್ಲಿ 'ಖಾಲಿಸ್ಥಾನ' ಪ್ರತ್ಯೇಕ ದೇಶದ ಬೇಡಿಕೆಯ ತೀವ್ರತೆಯನ್ನು ಮತ್ತೆ ಚುರುಕಿಗೊಳಿಸಲು ಯುವಕರನ್ನು ತೀವ್ರಗಾಮಿಗಳಾಗಲು ಪ್ರೇರೇಪಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆಗಳು ಸರ್ಕಾರಕ್ಕೆ ಎಚ್ಚರಿಸಿವೆ.
ಜರ್ಮನಿಯ ಬಬ್ಬರ್ ಖಾಸ್ಲಾ ದ ಮುಖಂಡ ರೇಶಮ್ ಬಬ್ಬರ್ ಖಾಸ್ಲಾ ಹೊರಡಿಸಿರುವ ಗುಪ್ತ ಮಾಹಿತಿಯ ಪ್ರಕಾರ ೨೦ ದೇಶಗಳ ಸಿಖ್ ಸಮುದಾಯದವರನ್ನು ಒಗ್ಗೂಡಿಸಲು ಮುಂದಾಗಿದ್ದಾರೆ. ಈ ಸಂಸ್ಥೆಯ ಭಾರತ, ಅಮೇರಿಕಾ ನ್ಯೂಜೀಲ್ಯಾಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ಕಿನ್ಯಾದ ಮುಖಂಡರುಗಳು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಬ್ಬರ್ ಖಾಸ್ಲಾ ಸಂಘಟನೆ ಪಾಕಿಸ್ತಾನದ ಉಗ್ರ ಸಂಘಟನೆಗಳಾದ ಲಷ್ಕರ್ ಎ ತೈಬಾ, ಜೈಶ್ ಎ ಮೊಹಮ್ಮದ್ ಹಾಗೂ ಖಾಲಿಸ್ಥಾನ್ ಜಿಂದಾಬಾದ್ ಫೋರ್ಸ್ ಸಂಘಟನೆಗಳ ಜೊತೆಗೆ ನಿಕಟ ಸಂಬಂಧ ಹೊಂದಿದ್ದು ಈ ಸಂಸ್ಥೆಗಳಿಗೆ, ಐ ಎಸ್ ಐ ಒಡಗೂಡಿ ಧನ ಸಹಾಯವನ್ನೂ ಮಾಡುತ್ತಿದೆ.
"ರೇಶಮ್ ಸಿಂಗ್ ಮತ್ತು ಇತರ ಸಿಖ್ ಸಂಘಟನೆಗಳ ನಾಯಕರು ಈ ಸಮಾವೇಶಕ್ಕೆ ವಿವಿಧ ರಾಷ್ಟ್ರಗಳ ನಾಯಕರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಎದುರು ಭಾರತದ ವಿರುದ್ಧ ಪ್ರತಿಭಟನೆ ನಡೆಸಲು ಕೂಡ ಈ ಸಂಸ್ಥೆಗಳು ಯೋಜನೆ ಹಮ್ಮಿಕೊಂಡಿವೆ" ಎಂದು ಗುಪ್ತ ಮಾಹಿತಿಯಲ್ಲಿ ತಿಳಿಸಲಾಗಿದೆ.
ಇತ್ತೀಚಿಗೆ ಭಾರತದಲ್ಲಾದ ಸಿಖ್ ಧರ್ಮಗ್ರಂಥದ ವಿವಾದವನ್ನು ಈ ಸಮಾವೇಶದಲ್ಲಿ ಬಿಂಬಿಸಿ, ಸಿಖ್ಖರ ಪ್ರತ್ಯೇಕ ದೇಶದ ಬೇಡಿಕೆಗೆ ಕೂಡ ಧ್ವನಿ ಮೊಳಗಿಸುವ ಸಾಧ್ಯತೆ ಇದೆ ಎಂಬುದು ಭಾರತದ ರಕ್ಷಣಾ ಮತ್ತು ಗುಪ್ತಚರ ಇಲಾಖೆಗಳಿಗೆ ಕಳವಳ ತಂದಿದೆ.
ಪಂಜಾಬಿನಲ್ಲಿ ಸಿಖ್ಖರ ಪವಿತ್ರ ಗ್ರಂಥವನ್ನು ಹಾಳುಗೆಡವಿದ ಆರೋಪದ ಮೇಲೆ ಎರಡು ವಾರದವರೆಗೆ ಬೃಹತ್ ಪ್ರತಿಭಟನೆಗಳು ನಡೆದಿದ್ದವು.
"ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವಿರೋಧಿ ಧ್ವನಿ ಮೊಳಗಿಸಲು ಹಾಗೂ ಯುವಕರನ್ನು ತೀವ್ರಗಾಮಿ ಚಿಂತನೆಗೆ ಹಚ್ಚಲು ಈ ಸಮಾವೇಶ ಆಯೋಜಿಸಲಾಗಿದೆ. ೨೭ ದೇಶಗಳ ಪ್ರತ್ಯೇಕವಾದಿ ಬಣಗಳ ನಾಯಕರುಗಳಲ್ಲಿ ಕೆಲವರಾದ ಜೋಗಾ ಸಿಂಗ್, ಕುಲ್ದೀಪ್ ಸಿಂಗ್ ಚಹೇರು ಮತ್ತು ಲಾವ್ಸಿಂದರ್ ಸಿಂಗ್ ದಲ್ವಾಲ್ ಈ ಆಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ" ಎಂದು ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.