ರಾವಲ್ಪಿಂಡಿ: ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ಮಾಡುತ್ತಿರುವ ಪಾಕಿಸ್ತಾನ ಇದೀಗ ತನ್ನ ಉದ್ಧಟತನವನ್ನು ಮತ್ತೂ ಮುಂದುವರಿಸಿದ್ದು, ಯಾವುದೇ ರೀತಿಯ ಯುದ್ಧವನ್ನಾದರೂ ಎದುರಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಷ್ ಸೋಮವಾರ ಹೇಳಿದ್ದಾರೆ.
1965ರ ಭಾರತ-ಪಾಕಿಸ್ತಾನ ಯುದ್ಧದ 50ನೇ ವರ್ಷಾಚರಣೆ ಅಂಗವಾಗಿ ಪಾಕಿಸ್ತಾನ ಸೇನಾ ಕಾರ್ಯಾಲಯದಲ್ಲಿ ಆಯೋಜಸಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕಳೆದ 50 ವರ್ಷಗಳಿಂದಲೂ ಪಾಕಿಸ್ತಾನ ಸಾಕಷ್ಟು ಏಳು-ಬೀಳುಗಳನ್ನು ಅನುಭವಿಸಿದೆ. ಆದರೆ, ಇದೀಗ ಪಾಕಿಸ್ತಾನ ಈ ಹಿಂದಿಗಿಂತಲೂ ಸಾಕಷ್ಟು ಬಲಶಾಲಿ ದೇಶವಾಗಿ ಹೊರಹೊಮ್ಮುತ್ತಿದ್ದು, ಯಾವುದೇ ಸಂದರ್ಭದಲ್ಲಿ ಯುದ್ಧ ಎದುರಾದರೆ ಅದನ್ನು ಎದುರಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಶ್ಮೀರ ವಿವಾದ ಕುರಿತಂತೆ ಪ್ರಸ್ತಾಪ ಮಾಡಿರುವ ಅವರು, ಕಾಶ್ಮೀರ ವಿವಾದ ಮುಗಿಯದ ವಿಚಾರ. ಕಾಶ್ಮೀರ ವಿವಾದ ಇತ್ಯರ್ಥಗೊಳ್ಳುವವರೆಗೂ ಎರಡು ದೇಶಗಳ ನಡುವಿನ ಸಮಸ್ಯೆ ಎಂದಿಗೂ ಬಗೆ ಹರಿಯುವುದಿಲ್ಲ. ಪಾಕಿಸ್ತಾನ ಸೇನೆಯು ಯಾವುದೇ ರೀತಿಯ ಆಂತರಿಕ ಹಾಗೂ ಬಾಹ್ಯ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದು, ಸಣ್ಣ ಅಥವಾ ದೊಡ್ಡ ರೀತಿಯ ಯುದ್ಧಕ್ಕೂ ಸಿದ್ಧವಿದೆ. ಒಂದು ವೇಳೆ ಶತ್ರು ದೇಶ ಯುದ್ಧಕ್ಕೆ ಬಂದಿದ್ದೇ ಆದರೆ, ಯುದ್ಧಕ್ಕೆ ಪ್ರತ್ಯುತ್ತರವಾಗಿ ಎದುರಾಳಿಗಳು ಬೆಲೆತೆರಲಾಗದಂತಹ ನಷ್ಟ ಅನುಭವಿಸುವುದು ಖಂಡಿತ ಎಂದು ಹೇಳಿದ್ದಾರೆ.
1965ರ ಭಾರತ-ಪಾಕಿಸ್ತಾನ ಯುದ್ಧದ 50ನೇ ವರ್ಷಾಚರಣೆ ದಿನವಾದ ಸೆಪ್ಟೆಂಬರ್2 ರಂದು ಮಾತನಾಡಿದ್ದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು, ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದೆ. ಭವಿಷ್ಯದಲ್ಲಿ ಒಂದು ವೇಳೆ ದಿಢೀರ್ ಹಾಗೂ ಲಘು ಯುದ್ಧ ಎದುರಾದರೆ ಅದನ್ನು ಎದುರಿಸಲು ಭಾರತ ಸಿದ್ಧವಿದೆ ಎಂದು ಹೇಳಿದ್ದರು. ದಲ್ಬೀರ್ ಸಿಂಗ್ ಅವರ ಹೇಳಿಕೆಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ರೀತಿಯ ಹೇಳಿಕೆ ನೀಡಿರುವುದು ಉಭಯ ದೇಶಗಲ ನಡುವೆ ಕಟು ವಾಕ್ ಸಮರದ ವಾತಾವರಣ ಸೃಷ್ಟಿಗೆ ಎಡೆಮಾಡಿಕೊಟ್ಟಿದೆ.