ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪಿಆರ್‍ಒ ಸೈಯ್ಯದ್ ರಿಯಾಜ್ ಮತ್ತು ಬಿ.ಎಂ.ಶ್ರೀನಿವಾಸೇಗೌಡ ಅವರಿಗೆ ಜಾಮೀನು ನೀಡದಂತೆ ಎಸ್‍ಐಟಿ ಪರ ವಕೀಲರು ಹೈಕೋರ್ಟ್‍ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ.
ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಿಯಾಜ್ ಮತ್ತು ಶ್ರೀನಿವಾಸೇಗೌಡ ಅವರು ಜಾಮೀನು ಕೋರಿ ಹೈ ಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ.ಎಲ್.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಆಕ್ಷೇಪಣೆಯಲ್ಲೇನಿದೆ: ಲೋಕಾಯುಕ್ತ ಸಂಸ್ಥೆಯಲ್ಲಿ ಪಿಆರ್‍ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಜಿ ದಾರ ರಿಯಾಜ್ ಅವರು ಇತರೆ ಆರೋಪಿಗಳ ಜತೆ ಕೂಡಿ, ಬೆಂಗಳೂರು ನಗರದ ಜಿಲ್ಲಾಧಿಕಾರಿ ಡಿ.ಸಿ.ಶಂಕರ್, ಬೆಂಗಳೂರು ದಕ್ಷಿಣದ ತಹಸೀಲ್ದಾರ್ ಡಾ.ದಯಾ ನಂದ್ ಅವರನ್ನು ಲೋಕಾಯುಕ್ತ ಕಚೇರಿಗೆ ಬುಲಾವ್ ನೀಡಿ ಹಣ ವಸೂಲಿಗೆ ಬೇಡಿಕೆ ಇಟ್ಟಿದ್ದರು ಮತ್ತು ಇಲಾಖೆ ವ್ಯವಹಾರದಲ್ಲಿ ಮಧ್ಯೆ ಪ್ರವೇಶ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಈ ಇಬ್ಬರು ಅಧಿಕಾರಿಗಳು ಬಾಯಿ ಬಿಟ್ಟಿದ್ದಾರೆಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.