ಬೆಂಗಳೂರು: ಬೃಹತ್ ಗದ್ದುಗೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ವಶವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಬಿ.ಎನ್. ಮಂಜುನಾಥ್ ರೆಡ್ಡಿ ಅವರು ಆಯ್ಕೆಯಾಗಿದ್ದಾರೆ.
ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆದ ಮೇಯರ್ ಚುನಾವಣೆಯಲ್ಲಿ ಮಡಿವಾಳ ವಾರ್ಡ್‌ನ ಮಂಜುನಾಥ್ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾದರು.
ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ಮೊದಲಿಗೆ ಮಂಜುನಾಥ್ ರೆಡ್ಡಿ ಪರ ಮತಹಾಕುವಂತೆ ಸೂಚಿಸಿದರು. ಬಳಿಕ ಎಲ್ಲಾ ಕಾರ್ಪೊರೇಟರಗಳು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.
ಕಾಂಗ್ರೆಸ್ ನ ಮಂಜುನಾಥ್ ರೆಡ್ಡಿ ಪರವಾಗಿ 131 ಮತಗಳು ಚಲಾವಣೆಯಾದರೆ, ಪ್ರತಿಸ್ಪರ್ಧಿ ಬಿಜೆಪಿಯ ಮಂಜುನಾಥ್ ರಾಜು ಅವರ ಪರ 128 ಮತಗಳು ಚಲಾವಣೆಯಾದವು.
ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರ ಬೆಂಬಲಿಗರಾಗಿರುವ ಮಂಜುನಾಥ್ ರೆಡ್ಡಿ ಅವರು, ಮೂರು ಬಾರಿ ಬಿಬಿಎಂಪಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದಾರೆ. ಬಿಎ ಪದವೀಧರರಾಗಿರುವ ಮಂಜುನಾಥ್ ರೆಡ್ಡಿ ಅವರು, 2013ರಲ್ಲಿ ಬಿಬಿಎಂಪಿಯಲ್ಲಿ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.
ಹೇಮಲತಾ ಉಪಮೇಯರ್
ಜೆಡಿಎಸ್ ಶಾಸಕ ಗೋಪಾಲಯ್ಯ ಅವರ ಪತ್ನಿ, ವೃಷಭಾವತಿ ನಗರ ವಾರ್ಡ್‌ನ ಜೆಡಿಎಸ್ ಸದಸ್ಯೆ ಎಸ್.ಪಿ.ಹೇಮಲತಾ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಹೇಮಲತಾ ಅವರ ಪರವಾಗಿಯೂ 131 ಸದಸ್ಯರು ಮತ ಚಲಾಯಿಸಿದರು.