ಹುಬ್ಬಳ್ಳಿ: ಹಿರಿಯ ಸಂಶೋಧಕ ಹಾಗೂ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಹಿಂದೆ ರಾಜ್ಯ ಸರ್ಕಾರದ ಕೈವಾಡ ಇದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಕಲಬುರ್ಗಿ ಹತ್ಯೆಯ ಹಿಂದೆ ಶ್ರೀರಾಮಸೇನೆ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುತಾಲಿಕ್, ಹತ್ಯೆಯ ಹಿಂದೆ ಸರ್ಕಾರದ ಪಾತ್ರ ಇರಬೇಕು ಎಂದಿದ್ದಾರೆ. ಅಲ್ಲದೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರೇ ಈ ಪ್ರಕರಣದ ಹೊಣೆ ಹೊರಬೇಕು ಎಂದಿದ್ದಾರೆ.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಪನ್ಸಾರೆ ಹಾಗೂ ದಾಬೋಲ್ಕರ್ ಅವರ ಹತ್ಯೆಗಳು ನಡೆದಿವೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಅನುಮಾನ ಮೂಡುತ್ತಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಲಬುರ್ಗಿಯವರ ಹತ್ಯೆ ಹಿಂದೆ ಶ್ರೀರಾಮಸೇನೆ ಕೈವಾಡ ಇದೆ ಎಂದು ಕೆಲ ಸಾಹಿತಿಗಳು ಪುಕಾರು ಹಬ್ಬಿಸುತ್ತಿದ್ದಾರೆ. ನಿಮ್ಮ ಬಳಿ ಶ್ರೀರಾಮ ಸೇನೆ ಶಾಮೀಲಾದ ಬಗ್ಗೆ ಸಾಕ್ಷ್ಯ ಇದೆಯಾ? ಎಂದು ಮುತಾಲಿಕ್ ಪ್ರಶ್ನಿಸಿದ್ದು, ಕಲಬುರ್ಗಿಯವರ ಕೊಲೆ ಹಿಂದೆ ಶ್ರೀರಾಮಸೇನೆಯ ಯಾವುದೇ ಪಾತ್ರ ಇಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.