ಚೆನ್ನೈ: ಮಳೆ ಕೊರತೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಈ ಹಿಂದೆ ರಾಜ್ಯ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಬರೆದಿದ್ದ ಪತ್ರಕ್ಕೆ ಪ್ರತ್ಯುತ್ತರ ನೀಡಿರುವ ತಮಿಳುನಾಡು ಸರ್ಕಾರ, ರಾಜ್ಯದಲ್ಲಿ ಮಳೆ ಕೊರತೆಯಾಗಿಲ್ಲ. ಹೀಗಾಗಿ ಕೂಡಲೇ ನೀರು ಬಿಡಿ ಎಂದು ತನ್ನ ಮೊಂಡುವಾದವನ್ನು ಮುಂದಿಟ್ಟಿದೆ.
ತಮಿಳುನಾಡಿನ ಮುಖ್ಯಕಾರ್ಯದರ್ಶಿ ಕೆ. ಜ್ಞಾನದೇಶಿಕನ್ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದು, ಕರ್ನಾಟಕದಲ್ಲಿ ಮಳೆ ಕೊರತೆಯಾಗಿಲ್ಲ. ಸಾಮಾನ್ಯಕ್ಕಿಂತ ಕೇವಲ ಶೇ.1ರಷ್ಟು ಮಾತ್ರ ಕಡಿಮೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂಕಿ-ಸಂಖ್ಯೆಗಳು ಮಾಹಿತಿ ನೀಡಿವೆ. ಹೀಗಾಗಿ ಪ್ರಸಕ್ತ ಮಳೆ ವರ್ಷವನ್ನು "ಸಂಕಷ್ಟ ವರ್ಷ" ಎಂದು ಪರಿಗಣಿಸದೆ ತಮಿಳು ನಾಡಿಗೆ ಬಿಡಬೇಕಾದ ಬಾಕಿ ನೀರನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ.
"ಸೆ.13ರವರೆಗೆ ಬಿಳಿಗುಂಡ್ಲು ಮಾಪನ ಕೇಂದ್ರದ ಮೂಲಕ ತಮಿಳುನಾಡಿಗೆ 111.333 ಟಿಎಂಸಿ ನೀರು ಬರಬೇಕಿತ್ತು. ಆದರೆ ಕೇವಲ 72.817 ಟಿಎಂಸಿ ನೀರನ್ನು ಮಾತ್ರ ಕರ್ನಾಟಕ ಬಿಡುಗಡೆ ಮಾಡಿದೆ. ಸೆ.14ಕ್ಕೆ ಅನ್ವಯವಾಗುವಂತೆ ಕರ್ನಾಟಕದ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಒಟ್ಟು 70 ಟಿಎಂಸಿ ನೀರಿದೆ. ಆದರೆ ಅದೇ ಮೆಟ್ಟೂರು ಡ್ಯಾಂನಲ್ಲಿ 38.823 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹವಿದೆ. ಹೀಗಾಗಿ ಮೆಟ್ಟೂರು ಡ್ಯಾಂನ ಒಳಹರಿವು ಕುಸಿಯುತ್ತಲೇ ಇದೆ. ಹೇಳಿದ್ದಾರೆ.
ಅಲ್ಲದೆ ಸೆ.13ರವರೆಗಿನ ಲೆಕ್ಕದ ಪ್ರಕಾರ ಕರ್ನಾಟಕದಿಂದ ತಮಿಳುನಾಡಿಗೆ ಇನ್ನೂ 38.516 ಟಿಎಂಸಿ ನೀರು ಬಾಕಿ ಬರಬೇಕಿದ್ದು, ಅದನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿ ಎಂದು ಜ್ಞಾನದೇಶಿಕನ್ ಅವರು ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಶಶಿ ಶೇಖರ್ ಅವರಿಗೂ ಪತ್ರ ಬರೆದೆದಿದ್ದು, ತಕ್ಷಣವೇ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ.