ಬೆಂಗಳೂರು: ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟಿದ್ದು. ಆದರೆ ವಿಸ್ತರಣೆಗೂ ಮುನ್ನ ಸಿಎಂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸೋಮವಾರ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಸಿಎಂಗೆ ಸಂಪುಟ ವಿಸ್ತರಣೆ ಚಿಂತನೆ ಬಂದಿದ್ದರೆ ಹೈಕಮಾಂಡ್ ಜೊತೆ ಚರ್ಚಿಸಲಿ. ಆದರೆ ಅದಕ್ಕೂ ಮುನ್ನ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚಿಸಬೇಕು. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎಂದಿದ್ದಾರೆ.
ಇನ್ನು ತಾವು ಸಂಪುಟ ಸೇರುವ ಬಗ್ಗೆ ತಮಗೆ ಯಾವುದೇ ಖಚಿತ ಮಾಹಿತಿ ಇಲ್ಲ ಎಂದ ಪರಮೇಶ್ವರ, ಸಂಪುಟ ಸೇರುವ ಸಂದರ್ಭ ಬಂದಾಗ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸಚಿವ ಆಕಾಂಕ್ಷಿಗಳು ನಾಯಕರ ಮನೆಗೆ ತೆರಳುವುದು ಸಾಮಾನ್ಯ. ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನಿಸಿದ ನಂತರ ಎಲ್ಲಾ ಪ್ರಕ್ರಿಯೆ ಸಂಪ್ರದಾಯದಂತೆ ನಡೆಯುತ್ತದೆ. ನಾನು ಮತ್ತು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತೇವೆ. ದೆಹಲಿಗೆ ಹೋಗುವ ಮಾಹಿತಿ ಮಾತ್ರ ನನ್ನ ಬಳಿ ಇದೆ ಎಂದರು.