ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಪ್ರಕರಣದಲ್ಲಿ ದಾಖಲಾಗಿದ್ದ ಎರಡನೇ ಎಫ್ಐಆರ್ ಸಂಬಂಧ ವಿಶೇಷ ತನಿಖಾ ತಂಡದ ಅಧಿಕಾರಿಗಳು ಗುರುವಾರ ನ್ಯಾಯಾಧೀಶರಿಗೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. 1,572 ಪುಟಗಳ ಚಾರ್ಜ್‍ಶೀಟ್‍ನಲ್ಲಿ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್ ರಾವ್ 1ನೇ ಆರೋಪಿಯಾಗಿದ್ದು ವಿ.ಭಾಸ್ಕರ್, ಅಶೋಕ್ ಕುಮಾರ್ ಹಾಗೂ ಅಮಾನತುಗೊಂಡಿರುವ ಲೋಕಾಯುಕ್ತ ಪಿಆರ್‍ಒ ಸೈಯ್ಯದ್ ರಿಯಾಜ್ ಕ್ರಮವಾಗಿ 2ರಿಂದ ನಾಲ್ಕನೇ ಆರೋಪಿಗಳಾಗಿದ್ದಾರೆ.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಒಟ್ಟು 120ಕ್ಕೂ ಹೆಚ್ಚು ಸಾಕ್ಷಿಗಳನ್ನು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಆರೋಪಿಗಳು ಡೀಲಿಂಗ್‍ಗಾಗಿ ಚನ್ನಬಸಪ್ಪ ಅವರೊಂದಿಗೆ ಮೊಬೈಲ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ದೂರವಾಣಿ ಕರೆಗಳ ವಿವರ, ಮೊಬೈಲ್ ಫೋನ್ ವಾಯ್ಸ್ ರೆಕಾರ್ಡಿಂಗ್, ಹೈದ್ರಾಬಾದ್‍ನ ಅವಾಸ್ ಹೋಟೆಲ್ ನಲ್ಲಿನ ಭೇಟಿಯಾಗಿರುವುದಕ್ಕೆ ಸಿಸಿ ಕ್ಯಾಮೆರಾ ವಿಡಿಯೋಗಳು ಇರುವ ಡಿವಿಆರ್, ಬೆಂಗಳೂರಿನಿಂದ ಹೈದ್ರಾಬಾದ್‍ಗೆ ವಿಮಾನದಲ್ಲಿ ತೆರಳಿರುವ ಟಿಕೆಟ್ ಮಾಹಿತಿ, ಆರೋಪಿಗಳು ಹಲವು ಬಾರಿ ಒಟ್ಟಿಗೆ ಸೇರಿರುವುದು ಸೇರಿದಂತೆ ಹಲವು ಮಹತ್ವದ ಸಾಕ್ಷ್ಯಗಳನ್ನು ಚಾರ್ಜ್‍ಶೀಟ್‍ನೊಂದಿಗೆ ನೀಡಲಾಗಿದೆ ಎಂದು ಎಸ್‍ಐಟಿ ತನಿಖಾಧಿಕಾರಿಗಳು ಹೇಳಿದ್ದಾರೆ.
ಸೆ.25ರ ಒಳಗೆ ಚಾರ್ಜ್‍ಶೀಟ್ ಸಲ್ಲಿಕೆಗೆ ಕಾಲಾವಕಾಶವಿತ್ತು. ಸೆ.24 ಹಾಗೂ ಸೆ.25ರಂದು ನ್ಯಾಯಾಲಯಗಳಿಗೆ ರಜೆ ಇರುವ ಕಾರಣ ಗುರುವಾರವೇ ಲೋಕಾಯುಕ್ತ ನ್ಯಾಯಾಧೀಶ ಬೊಪಯ್ಯ ಅವರ ನಿವಾಸಕ್ಕೆ ತೆರಳಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ಎಸ್‍ಐಟಿ ಮುಖ್ಯಸ್ಥ ಕಮಲ್‍ಪಂತ್ ಹೇಳಿದರು. ತುಂಗಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಪಿ.ಬಿ.ಚನ್ನಬಸಪ್ಪ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ 2013ರಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆದರೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗುವುದು ಎಂದು ಹೇಳಿದ ಅಶ್ವಿನ್‍ರಾವ್ ಸೇರಿದಂತೆ ನಾಲ್ವರು ಆರೋಪಿಗಳು, ಚನ್ನಬಸಪ್ಪ ಅವರನ್ನು ಹೈದ್ರಾಬಾದ್‍ನ ಅವಾಸ್ ಹೋಟೆಲ್‍ಗೆ ಹಲವು ಬಾರಿ ಕರೆಸಿಕೊಂಡಿದ್ದರು. ಈ ವೇಳೆ ಚನ್ನಬಸಪ್ಪ ಅವರೊಂದಿಗೆ ಮಾತನಾಡಿದ ಅಶ್ವಿನ್ ರಾವ್, ತನ್ನ ತಂದೆ ಲೋಕಾಯುಕ್ತರಾಗಿದ್ದು ಅವರ ಪ್ರಭಾವ ಬಳಸಿ ನಿಮ್ಮ ವಿರುದ್ಧ ಇರುವ ಅಕ್ರಮ ಆಸ್ತಿ ಪ್ರಕರಣದಲ್ಲಿ ಬಿ-ರಿಪೋರ್ಟ್ ಹಾಕಲಾಗುತ್ತದೆ. ಅದಕ್ಕಾಗಿ
ಶ್ಯಾಮ್ ಭಟ್ ವಿಚಾರಣೆ ಬೆಂಗಳೂರು: ಲೋಕಾಯುಕ್ತ ಕಚೇರಿ ದುರುಪಯೋಗಪಡಿಸಿಕೊಂಡು ಅಧಿಕಾರಿಗಳ ಸುಲಿಗೆ ಮಾಡುತ್ತಿದ್ದ ಆರೋಪಿಗಳಾದ ಅಶ್ವಿನ್ ರಾವ್ ಹಾಗೂ ತಂಡ ಬಿಡಿಎ ಆಯುಕ್ತ ಶ್ಯಾಮ್ ಭಟ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಅಲ್ಲದೇ ಅವರನ್ನು ಹೋಟೆಲ್‍ಗಳಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದರು. ಫೋನ್ ಮೂಲಕ ಶ್ಯಾಮ್ ಭಟ್ ಅವರೊಂದಿಗೆ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಎಸ್‍ಐಟಿ ಅಧಿಕಾರಿಗಳು ಗುರುವಾರ ಶ್ಯಾಮ್ ಭಟ್ ಅವರನ್ನು ವಿಚಾರಣೆ ನಡೆಸಿದ್ದಾರೆಂದು ಎಸ್ ಐಟಿ ಮೂಲಗಳು ತಿಳಿಸಿವೆ. ಶ್ಯಾಮ್ ಭಟ್ ಅವರು ಆರೋಪಿಗಳಿಗೆ ಹಣ ನೀಡಿರುವ ಬಗ್ಗೆ ಅನುಮಾನವಿದ್ದು ಈ ಹಿನ್ನೆಲೆಯಲ್ಲಿ ಅವರಿಂದ ಮಾಹಿತಿ ಸಂಗ್ರಹಿಸಲು ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.