ನವದೆಹಲಿ: ಕಳಸಾಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಶನಿವಾರ ಕರ್ನಾಟಕದಲ್ಲಿ ಬಂದ್ ಆಚರಿಸಿದರೆ, ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ನೂರಾರು ಕಾರ್ಯಕರ್ತರು ಕೇಂದ್ರ ಮತ್ತು ಗೋವಾ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮಹಾದಾಯಿ ನೀರು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಗೋವಾ ಸರ್ಕಾರ ತಕರಾರು ತೆಗೆದಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಯೋಜನೆ ಅನುಷ್ಠಾನಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ, ಕಾವೇರಿ ಕಣಿವೆಯ ಯೋಜನೆಗಳಿಗೆ ಕೇಂದ್ರ ಅನುಮತಿ ನೀಡಬೇಕು, ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡಬೇಕು, ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ.35ಕ್ಕೆ ಏರಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ರಮೇಶ್‍ಗೌಡ, ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಕೇಂದ್ರ ಮತ್ತು ನೆರೆರಾಜ್ಯಗಳ ಅನುಮತಿ ಕೇಳಬೇಕಾದ ಸ್ಥಿತಿ ಇದೆ. ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆಗಳಿಗೆ ತ್ವರಿತವಾಗಿ ಅನುಮಿತಿ ನೀಡಬೇಕು. ಈ ವಿಷಯದಲ್ಲಿ ರಾಜಕೀಯ, ತಾರತಮ್ಯ ಮಾಡಬಾರದು ಎಂದು ಒತ್ತಾಯಿಸಿದರು.
ಗೋಡೆ ಒಡೆಯುತ್ತೇವೆ
ಅ.10 ರಂದು ಬೆಳಗಾವಿಯ ಖಾನಾಪುರದ ಕಣಕುಂಬಿ ಬಳಿ ಕಳಸಾ ಬಂಡೂರಿ ನಾಲೆಯ ಗೋಡೆ ಒಡೆಯುವ ಚಳವಳಿ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಗುದ್ದಲಿ ತರಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದರು.