ಬೆಂಗಳೂರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಮತ್ತೊಮ್ಮೆ ತಿರಸ್ಕರಿಸಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಎರಡನೇ ಬಾರಿ ಮುಖಭಂಗ ಅನುಭವಿಸಿದೆ.
ನ್ಯಾ.ಎಸ್.ಬಿ.ಮಜಗೆ ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ್ಯಾ.ಕೆ.ಎಲ್.ಮಂಜುನಾಥ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಿತ್ತು. ಆದರೆ ಶಿಫಾರಸು ಮಾಡುವ ಮುನ್ನ ಆಯ್ಕೆ ಸಮಿತಿಯೊಂದಿಗೆ ಚರ್ಚಿಸಿಲ್ಲ. ಕೆ.ಎಲ್.ಮಂಜುನಾಥ್ ಬಗ್ಗೆ ಸೂಕ್ತ ಬದ್ಧತೆ ಇಲ್ಲ ಮತ್ತು ಮೊದಲ ಬಾರಿ ತಿರಸ್ಕರಿಸುವಾಗ ಕೆಲ ಟಿಪ್ಪಣಿ ಮಾಡಲಾಗಿದ್ದು, ಅದನ್ನು ಮತ್ತೊಮ್ಮೆ ಪರಿಶೀಲಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ.
ಎರಡು ಬಾರಿ ತಿರಸ್ಕಾರಗೊಂಡರೂ ತನ್ನ ಪ್ರಯತ್ನವನ್ನು ಮುಂದುವರೆಸಿರುವ ರಾಜ್ಯ ಸರ್ಕಾರ, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಯ್ಕೆ ಸಮಿತಿ ಸದಸ್ಯರಾದ ವಿಧಾನಸಭೆ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಿಗೆ ಹಾಗೂ ವಿಧಾನಸಭೆ ಸ್ಪೀಕರ್, ಪರಿಷತ್ ಸಭಾಪತಿಗೆ ಪತ್ರ ಬರೆದು, ನ್ಯಾ.ಕೆ.ಎಲ್. ಮಂಜುನಾಥ್ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದ್ದಾರೆ.
ನ್ಯಾ.ಕೆ.ಎಲ್.ಮಂಜುನಾಥ್ ಅವರ ಹೆಸರು ಶಿಫಾರಸು ಮಾಡಿದ ಬೆನ್ನೆಲ್ಲೇ, ಸಮಾಜ ಪರಿವರ್ತನೆ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಉಪ ಲೋಕಾಯುಕ್ತರ ಹುದ್ದೆಗೆ ಪ್ರಮಾಣಿಕರನ್ನು ನೇಮಕ ಮಾಡುವಂತೆ ಒತ್ತಾಯಿಸಿದ್ದರು.