ಸಿದ್ದರಾಮಯ್ಯ ಹಾಗೂ ದುಬಾರಿ ವಾಚ್
ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಚನೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೇ ಮೊದಲ ದೂರು ದಾಖಲಾಗಿದೆ.
ಸಿಎಂ ದುಬಾರಿ ವಾಚ್ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕೋರಿ ಹೈಕೋರ್ಟ್ ವಕೀಲ ನಟರಾಜ್ ಶರ್ಮಾ ಅವರು ಶನಿವಾರ ಎಸಿಬಿಗೆ ದೂರು ನೀಡಿದ್ದಾರೆ. ಎಸಿಬಿ ರಚನೆಯಾದ ನಂತರ ಬಂದ ಮೊದಲ ದೂರು ಇದಾಗಿದ್ದು, ಅದು ಸಿಎಂ ವಿರುದ್ಧವೇ ದಾಖಲಾಗಿರುವುದು ಮತ್ತೊಂದು ವಿಶೇಷ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೊರೆಯದ ಕಾರಣ ನಟರಾಜ್ ಶರ್ಮಾ ಅವರು ದೂರನ್ನು ನೇರವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ದುಬಾರಿ ವಾಚ್ ಅಕ್ರಮವಾಗಿ ಬಂದಿರುವ ಸಾಧ್ಯತೆ ಇದ್ದು, ವಾಚ್ ಹಿನ್ನಲೆ ಸಮಗ್ರ ತನಿಖೆಯಾಗಬೇಕು ಎಂದು ನಟರಾಜ ಶರ್ಮಾ ಮನವಿ ಮಾಡಿದ್ದಾರೆ.
ಕಳೆದ ಮಾರ್ಚ್ 30ರಂದು ಎಸಿಬಿ ರಚನೆ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ರಾಜ್ಯದ 30 ಜಿಲ್ಲೆಗಳಲ್ಲಿ ಎಸಿಬಿ ಪೊಲೀಸ್ ಠಾಣೆಗಳನ್ನು ಆರಂಭಿಸುವುದಾಗಿ ಹೇಳಿತ್ತು. ಅಲ್ಲದೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಸಾರ್ವಜನಿಕರು ಈ ಠಾಣೆಗಳಿಗೆ ನೀಡಬಹುದು ಎಂದು ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics