ಪಿಯು ಬೋರ್ಡ್ (ಸಂಗ್ರಹ ಚಿತ್ರ)
ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯ ದೊಡ್ಡ ಜಾಲವನ್ನು ಭೇದಿಸಿರುವ ಸಿಐಡಿ, ಸಚಿವರೊಬ್ಬರ ಪಿಎ ಸೇರಿದಂತೆ ಪ್ರಮುಖ ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಮಾರ್ಚ್ 21ರಂದು ಪ್ರಶ್ನೆ ಪತ್ರಿಕೆ ಸೋರಿಯಾದ ಪ್ರಕರಣ ಸಂಬಂಧ ಬೆಂಗಳೂರಿನ ವಿಜಯನಗರದಲ್ಲಿರುವ ಕೇಂಬ್ರಿಡ್ಜ್ ಕಾಲೇಜ್ ನ ದೈಹಿಕ ಶಿಕ್ಷಕ ಹಾಗೂ ಎಲ್ಐಸಿ ಏಜೆಂಟ್ ಸಹ ಆಗಿರುವ ಮಂಜುನಾಥ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಪಿಎ ಓಬಳ್ ರಾಜ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿ ರುದ್ರಪ್ಪ ಎಂಬುವವರನ್ನು ಬಂಧಿಸಲಾಗಿದೆ ಎಂದು ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಮೊದಲ ಪ್ರಶ್ನೆ ಪತ್ರಿಕೆ ಮಂಜುನಾಥ್ ಗೆ ರವಾನೆಯಾಗಿದ್ದು, ಅದನ್ನು ಆತ ಸಚಿವರ ಪಿಎಗೆ 10 ಲಕ್ಷ ರುಪಾಯಿಗೆ ಮಾರಾಟ ಮಾಡಿದ್ದ. ನಂತರ ಓಬಳ್ ರಾಜ್ ನಿಂದ ಪ್ರಶ್ನೆ ಪತ್ರಿಕೆ ಪಡೆದ ರುದ್ರಪ್ಪ ಅದನ್ನು ವಾಟ್ಸಪ್ ಹಾಗೂ ಇ-ಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಿದ್ದಲ್ಲದೆ ಕಾಲೇಜ್ ಹಾಗೂ ಟ್ಯುಟೋರಿಯಲ್ಸ್ ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸಿಐಡಿ ತಿಳಿಸಿದೆ.
ಇನ್ನು ಮಾರ್ಚ್ 31ರಂದು 2ನೇ ಬಾರಿ ಪ್ರಶ್ನೆ ಪತ್ರಿಕೆ ಸೋರಿಯಾದ ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ.