ಪಿಲಿಬಿಟ್: 1991ರಲ್ಲಿ ಉತ್ತರ ಪ್ರದೇಶದ ಪಿಲಿಬಿಟ್‌ನಲ್ಲಿ 10 ಮಂದಿ ಸಿಖ್ ತೀರ್ಥಯಾತ್ರಿಕರನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆಗೈದ ಪ್ರಕರಣದಲ್ಲಿ 47 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
1991 ಜುಲೈ 1 ರಂದು ರಾತ್ರಿ ನಡೆದ ಈ ನಕಲಿ ಎನ್‌ಕೌಂಟರ್‌ನಲ್ಲಿ ಈ ಪೊಲೀಸರು ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಹೇಳಿದ್ದು, ಸೋಮವಾರ ಇವರಿಗೆ ಶಿಕ್ಷೆಯನ್ನು ಪ್ರಕಟಿಸಿದೆ.
ಸುಮಾರು 25 ವರ್ಷಗಳ ಹಿಂದಿನ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ ತನಿಖೆ ನಡೆಸಿತ್ತು. ಒಟ್ಟು 57 ಪೊಲೀಸರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದ್ದರೂ ತನಿಖೆಯ ವಿಚಾರಣೆ ನಡೆದು ಬರುವ ಇಷ್ಟೊತ್ತಿನಲ್ಲಿ 10 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ.
ಶುಕ್ರವಾರ 20 ಪೊಲೀಸರು ಕೋರ್ಟ್‌ಗೆ ಹಾಜರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಅದೇ ವೇಳೆ ಇನ್ನುಳಿದ 27 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಏನಿದು ಪ್ರಕರಣ?: 1991ರಲ್ಲಿ ಉತ್ತರಪ್ರದೇಶದ ತೆರಾಯಿ ಪ್ರದೇಶದಲ್ಲಿ ಮಿಲಿಟರಿಗೆ ಸಂಬಂಧಿಸಿದ ಸಂಘರ್ಷಗಳುಂಟಾಗಿದ್ದವು. ಆ ವೇಳೆ ಸ್ಥಳೀಯ ಹಿಂದಿ ದಿನಪತ್ರಿಕೆಯೊಂದು ಇಲ್ಲಿನ ಕೆಲವು ಮಂದಿ ಅಪರಾಧ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರು ತಮ್ಮ ಕುಟುಂಬದೊಂದಿಗೆ ತೀರ್ಥಯಾತ್ರೆ ಕೈಗೊಂಡಿದ್ದಾರೆ ಎಂದು ಸುದ್ದಿ ಪ್ರಕಟಿಸಿತ್ತು. ಈ ಸುದ್ದಿಯನ್ನು ನೋಡಿದ ಪೊಲೀಸರು ಕೆಲವು ಮಾಹಿತಿಗಳನ್ನು ಕಲೆ ಹಾಕಿ ತೀರ್ಥಯಾತ್ರೆ ಕೈಗೊಂಡಿದ್ದ ಕೆಲವು ಮಂದಿಯ ಮೇಲೆ ನಿಗಾ ಇಟ್ಟಿತ್ತು. ಬರೇಲಿಯ ಪ್ರಾದೇಶಿಕ ಸಾರಿಗೆ ಸಂಸ್ಥೆಯಿಂದ ತಾತ್ಕಾಲಿಕ ಅನುಮತಿ ಪಡೆದಿರುವ ಬಸ್ಸಿನಲ್ಲಿ ಮಹಿಳೆಯರು ಸೇರಿದಂತೆ ತೀರ್ಥಯಾತ್ರಿಕರ ಗುಂಪು ಪ್ರಯಾಣ ಬೆಳಸಿತ್ತು.
ಮಾರ್ಚ್ 13ರಂದು ಈ ಬಸ್ ಪಿಲಿಬಿಟ್‌ಗೆ ತಲುಪಿದಾಗ ಪೊಲೀಸರ ತಂಡವೊಂದು ಕಚಲಾಪುಲ್ ಘಾಟ್‌ನಲ್ಲಿ ಈ ಬಸ್‌ನ್ನು ತಡೆಹಿಡಿದಿತ್ತು. ಅದರಲ್ಲಿದ್ದ 11 ಸಿಖ್‌ರನ್ನು ಪೊಲೀಸರು ಬಲವಂತವಾಗಿ ಕೆಳಗಿಳಿಸಿದ್ದರು ಎಂದು ಹೇಳಲಾಗುತ್ತಿದೆ. ಅದೇ ವೇಳೆ ಅದರಲ್ಲಿದ್ದ ಮತ್ತು ಇತರ ಪ್ರಯಾಣಿಕರಾದ ಮಹಿಳೆಯರನ್ನು ಮತ್ತು ಮಕ್ಕಳನ್ನು ಪಿಲಿಬಿಟ್‌ನ ಗುರುದ್ವಾರಕ್ಕೆ ಕರೆದೊಯ್ಯಲಾಯಿತು. ಪುರುಷರನ್ನು ಬೇರೆಯೇ ವಾಹನದಲ್ಲಿ ಕುಳ್ಳಿರಿಸಲಾಯಿತು. ಮುಸ್ಸಂಜೆ ವೇಳೆ ಪೊಲೀಸ್ ತಂಡದೊಂದಿಗೆ ಹೆಚ್ಚುವರಿ ಸೈನಿಕ ಪಡೆಯೂ ಸೇರಿದ್ದು, ಆ ಸಿಖ್ ಜನರನ್ನು ಮೂರು ಗುಂಪುಗಳನ್ನಾಗಿ ಮಾಡಲಾಯಿತು. ಜುಲೈ 12 ಮತ್ತು 13 ರಂದು ಪೊಲೀಸರು ಮೂರು ಎನ್‌ಕೌಂಟರ್‌ಗಳ ಮೂಲಕ ಬಿಲ್‌ಸಂದ್ರಾ, ನೌರಿಯಾ ಮತ್ತು ಪೂರಣ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಶದಲ್ಲಿದ್ದ ಆ ಸಿಖ್ ಜನರನ್ನು ಹತ್ಯೆಗೈದಿದ್ದರು.
ಆ ಸಿಖ್ ಜನರ ಕೈಯಲ್ಲಿ ಅಕ್ರಮ ಆಯುಧಗಳಿದ್ದು, ಅವರ ವಿರುದ್ಧ ಕ್ರಿಮಿನಲ್ ಕೇಸುಗಳೂ ದಾಖಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದರು.
ಆದಾಗ್ಯೂ, ಎನ್‌ಕೌಂಟರ್‌ಗೀಡಾದ 10 ಮಂದಿಯ ದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಅದೇ ದಿನ ಆ ದೇಹಗಳನ್ನು ದಫನ ಮಾಡಿದ್ದರು ಎಂದು ಸಿಬಿಐ ತನಿಖೆಯಿಂದ ತಿಳಿದು ಬಂದಿತ್ತು.